

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಕಡಲತೀರದಲ್ಲಿ ವಿವಿಧ ರೀತಿಯ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 80 ಮಂದಿಯನ್ನು ಬಂಧಿಸಲಾಗಿದ್ದು, 6 ಬೋಟ್, 3 ಬೈಕ್, ಅಕ್ರಮ ಶಸ್ತ್ರ ಹಾಗೂ ನಕಲಿ ಬಾಂಬ್ಗಳನ್ನು ಕರಾವಳಿ ಕಾವಲು ಪಡೆಯ ಪೊಲೀಸರು ವಶಕ್ಕೆ ಪಡೆದರು.
ಆದರೆ, ಇದು ನೈಜ ಘಟನೆಯಲ್ಲ. ಉಡುಪಿ ಜಿಲ್ಲೆಯ ಕರಾವಳಿ ಹಾಗೂ ಪ್ರಮುಖ ತಾಣಗಳಲ್ಲಿ ಬುಧವಾರ ಹಾಗೂ ಗುರುವಾರ ನಡೆದ ಸಾಗರ್ ಕವಚ್ ಅಣಕು ಕಾರ್ಯಾಚರಣೆಯ ವರದಿಯಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಲಿಕೆಯ ತಾಲೀಮು ನಡೆಸಿದರು.
ಇಂಡಿಯನ್ ಕೋಸ್ಟ್ ಗಾರ್ಡ್ ಆಯೋಜಿಸಿದ್ದ 2ನೇ ವರ್ಷದ ಸಾಗರ್ ಕವಚ್ ಅಣಕು ಕಾರ್ಯಾಚರಣೆ ಇದಾಗಿದ್ದು, ರಾಜ್ಯದ ಕಾರವಾರ ಬಂದರಿನಿಂದ ಮಂಗಳೂರು ಬಂದರು ವ್ಯಾಪ್ತಿಯಲ್ಲಿ ಹಾಗೂ ಕರಾವಳಿ ಪ್ರದೇಶಗಳ ರಕ್ಷಣೆಗಾಗಿ ಆಯೋಜಿಸಲಾಗಿತ್ತು. ದುಷ್ಕರ್ಮಿಗಳು ಅಥವಾ ಭಯೋತ್ಪಾದಕರು ಸಮುದ್ರ ಮಾರ್ಗದ ಮೂಲಕ ದೇಶದೊಳಗೆ ನುಸುಳಿ, ವಿಧ್ವಂಸಕ ಕೃತ್ಯ ನಡೆಸಲು ಮುಂದಾದಲ್ಲಿ ಅವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಈಗಿರುವ ವ್ಯವಸ್ಥೆ ಹಾಗೂ ಸೌಕರ್ಯದಲ್ಲಿ ಎಷ್ಟು ಬಲವಿದೆ ಎಂದು ಅರಿತುಕೊಳ್ಳುವ ಹಾಗೂ ಕಲಿಕೆಯ ಚಟುವಟಿಕೆ ಇದಾಗಿದೆ.
ಅ.16ರಂದು ನಡೆದ ಕಾರ್ಯಾಚರಣೆಯಲ್ಲಿ ಕೇರಳ ರಾಜ್ಯದ ಕೋಸ್ಟಲ್ ಗಾರ್ಡ್ನ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಗುರುವಾರ(ಅ.17)ವೂ ಸಹ ಕಾರ್ಯಾಚರಣೆ ಮುದುವರಿಯಿತು. ಕರಾವಳಿ ಕಾವಲು ಪಡೆ, ಕಸ್ಟಂ, ಕೋಸ್ಟ್ ಗಾರ್ಡ್, ಮೀನುಗಾರಿಕಾ ಇಲಾಖೆ, ಬಂದರು ಇಲಾಖೆಯವರೂ ಪಾಲ್ಗೊಂಡಿದ್ದರು.
ಜಿಲ್ಲೆಯ ಮಲ್ಪೆ ಬಂದರು, ಹೆಜಮಾಡಿ ಲೈಟ್ ಹೌಸ್, ಗಂಗೊಳ್ಳಿ ಹಾಗೂ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಸಾಗರ್ ಕವಚ್ ಅಣಕು ಕಾರ್ಯಾಚರಣೆಯಲ್ಲಿ ಬಹುಮುಖ್ಯವಾಗಿ ಮೀನುಗಾರರನ್ನು ಬಳಸಿಕೊಳ್ಳಲಾಗಿತ್ತು. ಸಮುದ್ರ ಮಾರ್ಗದ ಮೂಲಕ ಯಾವುದೇ ಅಪರಿಚಿತ ಬೋಟ್ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಕರಾವಳಿ ಕಾವಲು ಪಡೆ ಪೊಲೀಸರಿಗೆ ಪೂರ್ವ ಮಾಹಿತಿ ನೀಡುವವರು ಮೀನುಗಾರರೇ ಆಗಿರುತ್ತಾರೆ. ಹೀಗಾಗಿ ಅವರನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಮಲ್ಪೆ ಬಂದರಿನತ್ತ ಬಂದ ಬೋಟ್ಗಳ ಪರಿಶೀಲನೆ, ಅದರಲ್ಲಿರುವವರ ಐಡಿ ಕಾರ್ಡ್ ತಪಾಸಣೆ ಹಾಗೂ ಬೋಟ್ಗಳಲ್ಲಿ ಸಶಸ್ತ್ರಗಳು ಇವೆಯೇ ಎಂದು ಪರಿಶೀಲಿಸಲಾಯಿತು. ಇದೇ ವೇಳೆ ಸ್ಥಳೀಯರ ಸಹಭಾಗಿತ್ವದ ಬಗ್ಗೆಯೂ ಮಾಹಿತಿ ನೀಡಲಾಯಿತು.
ಸಾಗರ್ ಕವಚ್ ಅಣಕು ಕಾರ್ಯಾಚರಣೆಯು ನಮ್ಮ ಸಾಮರ್ಥ್ಯ ಪರಿಶೀಲಿಸಿಕೊಳ್ಳುವ ವಿಧಾನವಾಗಿದೆ. ಎರಡು ದಿನ ಕಾರ್ಯಾಚರಣೆ ನಡೆಸಿದ್ದೇವೆ. ಬರುವ ನವೆಂಬರ್ ತಿಂಗಳಲ್ಲಿ ಭಾರತೀಯ ನೌಕಾಪಡೆ ವತಿಯಿಂದ ಇನ್ನೊಂದು ಅಣಕು ಕಾರ್ಯಾಚರಣೆ ಆಯೋಜಿಸಲಾಗಿದೆ. ಪ್ರಸ್ತುತವಾಗಿ ರಾಜ್ಯದ ಕರಾವಳಿ ಕಾವಲು ಪಡೆಯಲ್ಲಿ ಸಾಕಷ್ಟು ಬೋಟ್ಸ್ಗಳಿವೆ. ಕರಾವಳಿಯ ರಕ್ಷಣೆ ವಿಚಾರ ಬಂದಾಗ ನೇವಿ ಹಾಗೂ ಕೋಸ್ಟ್ ಗಾರ್ಡ್ ಸಹ ಇರುವುದರಿಂದ ಹೆಚ್ಚಿನ ಬಲ, ಅಗತ್ಯ ಸೌಕರ್ಯಗಳಿವೆ. | ಮಿಥುನ್ ಎಚ್.ಎನ್.ಕರಾವಳಿ ಕಾವಲು ಪಡೆ ವರಿಷ್ಠ, ಉಡುಪಿ ಜಿಲ್ಲೆ