ರಾಜಬೀದಿಗಳಲ್ಲಿ ನಗರದೇವತೆಗಳ ವೈಭವೋಪೇತ ಮೆರವಣಿಗೆ

Shakthidevathegalu00000000001
Published on

ಚಿತ್ರದುರ್ಗ: ನಗರದ ರಾಜಬೀದಿಗಳಲ್ಲಿ ಶಕ್ತಿದೇವತೆಗಳ ವೈಭವೋಪೇತ ಮೆರವಣಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ನಡೆಯಿತು. ವಿಶ್ವ ಹಿಂದು ಪರಿಷತ್,ಬಜರಂಗದಳದದಿಂದ ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಶೋಭಾ ಯಾತ್ರೆ ಸೆ.17ರಂದು ನಡೆಯಲಿದೆ.

ಅದರ ಅಂಗವಾಗಿ ನಡೆದ ಮೆರವಣಿಗೆ ಮಹಾಗಣಪನ ಸನ್ನಿಧಾನವನ್ನು ತಲುಪಿತು. ಕಳೆದ ವರ್ಷ ಸೇರಿ ಎರಡನೇ ಬಾರಿ ಚಿತ್ರದುರ್ಗದ ಶಕ್ತಿದೇವತೆಗಳು ಈ ಸ್ಥಳದಲ್ಲಿ ಸಂಗಮಗೊಂಡವು. ಸೆ.14ರಂದು ನಡೆಯಲಿರುವ ಗಣಹೋಮಕ್ಕೆ ದೇವತೆಗಳು ಸಾಕ್ಷಿಯಾಗಲಿವೆ. ಶಕ್ತಿದೇವತೆಗಳ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪ,ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ಮಹಾಮಂಗಳಾರತಿ ಬಳಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆಗಾಗಿ ಕರೆತರಲಾಯಿತು.

ಪೂಜೆ ಬಳಿಕ ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ನೇತೃತ್ವದಲ್ಲಿ ಭವ್ಯ ಮೆರವಣಿಗೆ ಸಾಗಿತು. ನಗರ ದೇವತೆ ಗಳಾದ ಬರಗೇರಮ್ಮ, ಕನ್ನಿಕಾ ಪರಮೇಶ್ವರಿ, ಕಾಳಿ ಕಮಠೇಶ್ವರಿ, ಮಲೆನಾಡ ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ದುರ್ಗಾ ದೇವಿ ಸೇರಿ ಏಳು ದೇವತೆಗಳು ಪಾಲ್ಗೊಂಡಿದ್ದವು.

ಬುರುಜನಹಟ್ಟಿಯ ಸಿಹಿನೀರು ಹೊಂಡದಿಂದ ಆರಂಭವಾದ ದೇವತೆಗಳ ಮೆರವಣಿಗೆ ಗೌರಸಂದ್ರ ಮಾರಮ್ಮ ದೇಗುಲ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಬಿ.ಡಿ.ರಸ್ತೆ,ಎಸ್‌ಬಿಐ ವೃತ್ತ,ಪ್ರವಾಸಿ ಮಂದಿರ ತಲುಪಿತು. ನಂತರ ಕಣಿವೆ ಮಾರಮ್ಮ ದೇಗುಲದ ಬಳಿ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು.

ನಂತರ ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ಹಿಂದು ಮಹಾ ಗಣಪತಿ ಸನ್ನಿಧಾನಕ್ಕೆ ತಲುಪಿತು. ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಕುಣಿತ, ಉರುಮೆ, ತಮಟೆ ವಾದ್ಯ, ಕಹಳೆ, ಕರಡಿ ಚಮ್ಮಳ ಮೆರವಣಿಗೆಗೆ ಮೆರಗು ನೀಡಿದವು.

ಮಾರ್ಗದುದ್ದಕ್ಕೂ ಒಂದರ ಹಿಂದೆ ಮತ್ತೊಂದರಂತೆ ಸಾಗುತ್ತಿದ್ದ ದೇವತೆಗಳ ಮುಂಭಾಗದಲ್ಲಿ ಉತ್ಸವ ಸಮಿತಿ ಕಾರ್ಯಕರ್ತರು ಸೇರಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಉಧೋ ಉಧೋ ಎಂಬ ಜಯಘೋಷ ಮೊಳಗಿತು. ಈ ಸುಂದರ ದೃಶ್ಯವನ್ನು ರಸ್ತೆ ಬದಿಯಲ್ಲಿ ನಿಂತಿದ್ದ ಭಕ್ತರು ಕಣ್ತುಂಬಿಕೊಂಡರಲ್ಲದೆ, ಮೊಬೈಲ್‌ಗಳ ಮೂಲಕ ಸೆರೆಹಿಡಿಯಲು ಮುಂದಾದರು.

ಆರನೇ ಬಾರಿ ಸಮಾಗಮ

ಐತಿಹಾಸಿಕ ಕೋಟೆನಗರಿಯಲ್ಲಿ ಈ ರೀತಿ ಶಕ್ತಿದೇವತೆಗಳು ಒಂದೆಡೆ ಸೇರುತ್ತಿರುವುದು ಇದು ಆರನೇ ಬಾರಿ. 2014ರಲ್ಲಿ ಶಕ್ತಿ ದೇವತೆಗಳ ಸಂಗಮ ಹೆಸರಿನಲ್ಲಿ ಆಯೋಜಿಸಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಸುತ್ತಮುತ್ತ ಗ್ರಾಮಗಳ ಸುಮಾರು 58ಕ್ಕೂ ಹೆಚ್ಚು ಶಕ್ತಿದೇವತೆಗಳು ಪಾಲ್ಗೊಂಡಿದ್ದವು. ವಾಸವಿ ಮಹಲ್ ರಸ್ತೆಯ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ಆರ್ಯವೈಶ್ಯ ಸಂಘದಿಂದ ಈಚೆಗೆ ನಡೆದ ಪೂಜಾ ಕಾರ್ಯಕ್ರಮ ಸೇರಿ ಎರಡು ಬಾರಿ. ಮಳೆಗೆ ಪ್ರಾರ್ಥಿಸಿ ದಶಕದ ಹಿಂದೆ ಹೀಗೆ ಆರು ಬಾರಿ ಶಕ್ತಿದೇವತೆಗಳು ಸಮಾಗಮಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net