ಹೊಸದುರ್ಗದಲ್ಲಿ ಕೇಸರಿ ಕಲರವ

HSD SHOBAYATHRE (2)
Published on

ಹೊಸದುರ್ಗ: ವಿರಾಟ್ ಹಿಂದು ಮಹಾಸಾಗರ ಗಣಪತಿಯ ವಿಸರ್ಜನಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೆರಿತು.

ಶೋಭಾಯಾತ್ರೆಯಲ್ಲಿ ಕೇಸರಿ ಪೇಟ-ರುಮಾಲು ಧರಿಸಿದ್ದ ಸಾವಿರಾರು ಮಂದಿ ಕುಣಿದು ಕುಪ್ಪಳಿಸಿದರು.

ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಟಿ.ಬಿ.ವೃತ್ತದಲ್ಲಿ ಗಣೇಶ ಮೂರ್ತಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಮಹಾಮಂಗಳಾರತಿ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. 13 ದಿನಗಳ ಕಾಲ ಪ್ರತಿಷ್ಟಾಪಿಸಲಾಗಿದ್ದ ಗಣಪತಿ ಮೂರ್ತಿಗೆ ಶನಿವಾರ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದ ನಂತರ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆಗೆ ಕರೆತರಲಾಯಿತು.

ಪ್ರತಿ ದಿನ ನಿತ್ಯ ಪೂಜೆ, ಮಹಾಮಂಗಳಾರತಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶೋಭಾಯಾತ್ರೆಯ ಪೂರ್ವಭಾವಿಯಾಗಿ ಶುಕ್ರವಾರ ಗಣ ಹೋಮ, ಪೂರ್ಣಾಹುತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮೆರವಣಿಗೆ ಸಾಗುವ ಪಟ್ಟಣದ ಪ್ರಮುಖ ರಸ್ತೆ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ತಲೆಗೆ ಕೇಸರಿ ರುಮಾಲು ಸುತ್ತಿ, ಕುತ್ತಿಗೆಗೆ ಕೇಸರಿ ಶಾಲು ಹಾಕಿಕೊಂಡು, ಕೈಯಲ್ಲಿ ಸಂಗೊಳ್ಳಿ ರಾಯಣ್ಣ, ಹನುಮಂತ ಭಾವಚಿತ್ರವಿದ್ದ ಬೃಹತ್ ಗಾತ್ರದ ಕೇಸರಿ ದ್ವಜಗಳನ್ನು ಹಿಡಿದ್ದ ಯುವಕರ ಜಯಘೋಷಗಳು ಮುಗಿಲುಮುಟ್ಟಿತ್ತು. ಡಿಜೆ ಸಂಗೀತಕ್ಕೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.

ಮೆರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಭಕ್ತರು ರಸ್ತೆಗೆ ನೀರು ಹಾಕಿ, ರಂಗವಲ್ಲಿ ಹಾಕುವ ಮೂಲಕ ಮೆರವಣಿಗೆಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಪಟ್ಟಣದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ಸಾಗಿ ಬರುತ್ತಿದ್ದ ಇಕ್ಕೆಲಗಳಲ್ಲಿಯೂ ಸಹಸ್ರಾರು ಮಂದಿ ಇದ್ದರು. ಕಟ್ಟಡದ ಮೇಲೆ ನಿಂತ ಜನರು ಗಣೇಶನ ಮೇಲೆ ಹೂವು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಲಡ್ಡು, ಮಜ್ಜಿಗೆ, ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.

ಪಪ್ಪಿ ಡ್ಯಾನ್ಸ್: ಮೆರವಣಿಗೆ ಗಾಂಧಿ ಸರ್ಕಲ್‌ಗೆ ಆಗಮಿಸಿದಾಗ ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಮೆರವಣಿಗೆಯಲ್ಲಿ ಸೇರಿಕೊಂಡರು. ಈ ವೇಳೆ ಜನರ ಜೋಷ್ ಜೋರಾಯಿತು. ಯುವಕರ ಒತ್ತಾಯಕ್ಕೆ ಮಣಿದು ಯುವಕರ ಜತೆ ಪಪ್ಪಿ ಕುಣಿದು ಕುಪ್ಪಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net