

ಹುಬ್ಬಳ್ಳಿ : ಮಳೆಗಾಲದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯವು ತನ್ನ ವ್ಯಾಪ್ತಿಯ ರೈಲು ಮಾರ್ಗದುದ್ದಕ್ಕೂ ಸುರಕ್ಷತೆಯ ತಪಾಸಣೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮಳೆಗಾಲದಿಂದಾಗಿ ರೈಲ್ವೆ ಆಸ್ತಿಗಳಿಗೆ ಹಾನಿಯಾಗದಂತೆ ತಡೆಯಲು, ಪ್ರಯಾಣಿಕರ ಸುರಕ್ಷತಾ ಪ್ರಯಾಣ ಹಾಗೂ ಸರಾಗ ರೈಲು ಸಂಚಾರದ ಉದ್ದೇಶದಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆ.
ಘಾಟ್ ಪ್ರದೇಶಗಳಾದ ಮೈಸೂರು ರೈಲ್ವೆ ವಿಭಾಗದ ಸಕಲೇಶಪುರ- ಸುಬ್ರಹ್ಮಣ್ಯ ರೋಡ ಹಾಗೂ ಹುಬ್ಬಳ್ಳಿ ವಿಭಾಗದ ಕ್ಯಾಸ್ಟಲ್ ರಾಕ್-ಕುಲೇಮ್ಲ್ಲಿ ವಿಶೇಷ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಕೂಲ ಹವಮಾನ ಪರಿಸ್ಥಿತಿ ಸಂದರ್ಭದಲ್ಲಿ ರೈಲ್ವೆ ಸೌಕರ್ಯ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ನೈಋತ್ಯ ರೈಲ್ವೆ ವಲಯ ಬದ್ಧವಾಗಿದೆ ಎಂದು ವಲಯದ ಪ್ರಕಟಣೆ ತಿಳಿಸಿದೆ.
ಭಾರಿ ಮಳೆ ಹಾಗೂ ಚಂಡಮಾರುತ ಮುನ್ಸೂಚನೆಯನ್ನು ಪಡೆಯುವುದಕ್ಕಾಗಿ ಭಾರತೀಯ ಹವಮಾನ ಇಲಾಖೆಯಿಂದ ವಿಶೇಷ ಉಪಕರಣಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ.
ದುರ್ಬಲ ರೈಲ್ವೆ ಹಳಿಗಳನ್ನು ಮಳೆಗಾಲದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಸರಿಪಡಿಸಲಾಗುತ್ತಿದೆ. ರೈಲ್ವೆ ಯಾರ್ಡ್ಗಳಲ್ಲಿ ನೀರು ಹರಿದಹೋಗಲು ಒಳಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸಲಾಗುತ್ತಿದೆ. ಮಳೆಗಾಲದ ಸಮಯದಲ್ಲಿ ರೈಲು ಸಂಚಾರದಲ್ಲಿ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರತಿಕೂಲ ಹವಮಾನದ ಸಂದರ್ಭದಲ್ಲಿ ಹಳಿಗಳ ಮೇಲೆ ಮರಗಳು ಬಿದ್ದರೆ, ನೀರಿನ ಹರಿವು ಹೆಚ್ಚಿದರೆ ಅಥವಾ ಇನ್ನಿತರ ಸಮಸ್ಯೆಗಳನ್ನು ಉಂಟಾದರೆ ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ನಿವಾರಿಸುವ ಉದ್ದೇಶದಿಂದ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.