

ಹಿರಿಯೂರು: ಜೀವ ಸಂಕುಲಕ್ಕೆ ಸಂಜೀವಿನಿಯಾಗಿರುವ ನೀರಿನ ಮಹತ್ವ ಅರಿತು, ಪರಿಸರ ನೈರ್ಮಲ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ
ಜೀವ ಜಲ ಸುರಕ್ಷತೆ-ಪರಿಸರ ನೈರ್ಮಲ್ಯ ಜಾಗೃತಿ ಜಾಥ ಹಾಗೂ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಜೀವ ಜಲಕ್ಕೆ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ವಿವಿ ಸಾಗರ, ಗಾಯತ್ರಿ ಜಲಾಶಯ, ವೇದಾವತಿ, ಸುವರ್ಣಮುಖಿ ನದಿ ಪಾತ್ರ ತಾಲೂಕಿಗೆ ಪ್ರಕೃತಿ ಕೊಟ್ಟಿರುವ ವರವಾಗಿದೆ.
ಕಳೆದ ವರ್ಷ ವರುಣ ಕೃಪೆಯಿಂದ ಜಲಾಶಯ ಭರ್ತಿಯಾಗಿ, ಕುಡಿಯುವ ನೀರಿನ ಹಾಹಾಕಾರ ದೂರಾಗಿದೆ ಎಂದರು.
ವಿವಿ ಸಾಗರದಿಂದ ನೇರ ಪೈಪ್ ಲೈನ್ ಮೂಲಕ ಹಿರಿಯೂರು ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಪಟ್ಟಣದ 31 ವಾರ್ಡ್‌ಗಳಿಗೆ ನೀರು ಪೂರೈಕೆಗೆ ಕ್ರಮವಹಿಸಿದ್ದು, ಜಲ ಸಂಗ್ರಹಗಾರದಲ್ಲಿ ಸ್ವಚ್ಛತೆ, ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪರಿಸರಕ್ಕೆ ಹಾನಿ ಮಾಡುವ ಮಾನವನ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಎಲ್ಲೆಡೆ ಹಸಿರನ್ನು ಹೆಚ್ಚಿಸಬೇಕು. ಆಧುನಿಕತೆಯ ವೇಗದ ಬದುಕಿನಲ್ಲಿ ಮನುಷ್ಯನ ಆರೋಗ್ಯ ಕೆಡುತ್ತಿರುವ ಜತೆಯಲ್ಲಿ ಪರಿಸರ ಕೆಡುತ್ತಿದೆ.
ವಿಷಕಾರಿ ಗಾಳಿ, ನೀರು, ಆಹಾರ ಸೇವಿಸುತ್ತಿರುವುದರಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ ಎಂದರು.
ಇದಕ್ಕೆ ಪರಿಸರ ನಾಶವೇ ಮುಖ್ಯ ಕಾರಣವಾಗಿದೆ. ಆರೋಗ್ಯವಂತ ಜೀವನ ನಡೆಸಬೇಕಾದರೆ ತಮ್ಮ ಮನೆ, ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
ಸ್ವಚ್ಛ, ಸುಂದರ ಹಿರಿಯೂರು ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಜೀವ ಜಲ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪರಿಸರ ನೈರ್ಮಲ್ಯ,ನೀರಿನ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು.
ಜಲ ಸಂಗ್ರಹಗಾರ, ಓವರ್ ಹೆಡ್, ಮಿನಿ ಟ್ಯಾಂಕ್ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದರು.
ನಗರ ಸಭೆ ಪೌರಾಯುಕ್ತ ಎಚ್.ಮಹಾಂತೇಶ್ ಮಾತನಾಡಿ, ನಗರ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಪೌರ ಕಾರ್ಮಿಕರು ಶ್ರಮಿಸುತ್ತಿದ್ದು,
ಜಲ ಸಂಗ್ರಹಗಾರದಲ್ಲಿ ನೀರಿನ ಸುರಕ್ಷತೆಗೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.
ಪರಿಸರ ನೈರ್ಮಲ್ಯ-ಜೀವ ಜಲ ಸಂರಕ್ಷಣೆ ಕುರಿತು ನಾಟಕ ಅಭಿಯಾನದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದರು.
ತಹಸೀಲ್ದಾರ್ ರಾಜೇಶ್ ಕುಮಾರ್, ಡಿವೈಎಸ್ಪಿ ಚೈತ್ರಾ, ನಗರ ಸಭೆ ಸದಸ್ಯರಾದ ಶಿವರಂಜನಿ, ಈರಲಿಂಗೇಗೌಡ, ಪ್ರಕಾಶ್, ಶಂಷುನ್ನೀಸಾ, ಈ.ಮಂಜು,
ಅಜ್ಜಪ್ಪ, ತಿಪ್ಪೇಸ್ವಾಮಿ, ಗೀತಾ, ಮಮತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ.ರಮೇಶ್, ಕೆಪಿಸಿಸಿ ಸದಸ್ಯ ಸುರೇಶ್ ಬಾಬು,
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ಉಲ್ಲಾ, ಜಗದೀಶ್, ಹರೀಶ್, ಜನಾರ್ದನ್, ಸುನೀಲ್, ಜಿ.ದಾದಾಪೀರ್ ಇತರರಿದ್ದರು.
ಬಯಲು ಸೀಮೆ ಜನರ ಪಾಲಿಗೆ ವೇದಾವತಿ ನದಿ ಪವಿತ್ರವಾಗಿದ್ದು, ಇತರ ಜಲ ಮೂಲಗಳ ಶುದ್ಧೀಕರಣದ ಮೂಲಕ ಮುಂದಿನ ಪೀಳಿಗೆಗೆ ಜೀವಜಲಯವನ್ನು ಬಳುವಳಿಯಾಗಿ ನೀಡಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ, ಜಲ ಮೂಲ ಶುದ್ಧೀಕರಣಕ್ಕೆ ಎಲ್ಲರ ಸಹಕಾರ ಅಗತ್ಯ.ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ