ಮನರಂಜನಾ ಕೇಂದ್ರಗಳಲ್ಲಿ ಸುರಕ್ಷತೆ ಪರಿಶೀಲನೆ: ಬೆಸ್ಕಾಂನೊಂದಿಗೆ ಪರಿಶೀಲಿಸಲು ಪಾಲಿಕೆ ನಿರ್ಧಾರ

Vijayavani-logo
Published on

ಬೆಂಗಳೂರು: ನಗರದಲ್ಲಿರುವ ಮನರಂಜನಾ ಕೇಂದ್ರಗಳಲ್ಲಿ ಅಳವಡಿಸಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಇಂದೂರ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಹೆಚ್ಚಿನ ಸಾವು ನೋವು ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಳವಡಿಸಿರುವ ಉಪಕರಣಗಳ ಜತೆಗೆ ಹೊಸದಾಗಿ ಅಳವಡಿಸುವಂತಿದ್ದಲ್ಲಿ ಅದನ್ನೂ ಪರಿಶೀಲಿಸಲಾಗುವುದು. ಹಿಂದಿನ ವರ್ಷ ನಗರದಲ್ಲಿ ಸಂಭವಿಸಿದ ಪ್ರಕರಣವೊಂದರ ವೇಳೆ ವಿವಿಧೆಡೆ ತಪಾಸಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು ಎಂದರು.

ಈ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ಬಳಿಕ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಲಾಗಿದೆ. ಮಾಲ್‌ಗಳು, ಮನರಂಜನಾ ಕೇಂದ್ರಗಳು ಹಾಗೂ ಇನ್ನಿತರ ಕೇಂದ್ರಗಳನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಬೆಸ್ಕಾಂನೊಂದಿಗೆ ಜಂಟಿ ತಪಾಸಣೆ:

ಅಪಾರ್ಟ್‌ಮೆಂಟ್ ಸೇರಿದಂತೆ ವಿವಿಧ ಕಟ್ಟಡಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ. ಹಳೆಯ ಕಟ್ಟಡಗಳಲ್ಲಿ ಇಂತಹ ಸೌಲಭ್ಯವಿಲ್ಲದೆ ಇತ್ತೀಚಿಗೆ ಅಳವಡಿಸಿಕೊಂಡಿದ್ದಲ್ಲಿ ಅವುಗಳನ್ನೂ ತಪಾಸಣೆಗೆ ಒಳಪಡಿಸಲಾಗುವು. ಈ ಕಾರ್ಯವನ್ನು ಬೆಸ್ಕಾಂ ಜತೆ ಸೇರಿ ಅನುಷ್ಠಾನಕ್ಕೆ ತರಲಾಗುವುದು. ಒಟ್ಟಾರೆ ಅಗ್ನಿ ದುರಂತ ತಪ್ಪಿಸುವುದು ನಮ್ಮ ಉದ್ದೇಶವಾಗಿದೆ. ಅನಾಹುತ ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಕಟ್ಟಡ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದು ತುಷಾರ್ ಗಿರಿನಾಥ್ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net