

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದ ವತಿಯಿಂದ ಇಲ್ಲಿನ ರೈಲ್ವೆ ಆಫೀಸರ್ಸ್ ಕ್ಲಬ್ನಲ್ಲಿ ಸೋಮವಾರದಂದು ಸುರಕ್ಷತಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ವಿವಿಧ ಶಾಖೆಗಳಿಗೆ ಸೇರಿದ ಒಟ್ಟು 59 ರೈಲ್ವೆ ಸಿಬ್ಬಂದಿಗೆ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಸುರಕ್ಷತಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರೇಮ್ ಚಂದ್ರ ಹರಿಜನ್, ಸುರಕ್ಷತೆ ರೈಲ್ವೆ ಸೇವೆಯ ಮೂಲ ಆಧಾರವಾಗಿದ್ದು, ನಮ್ಮ ಮೊದಲ ಆದ್ಯತೆಯಾಗಿದೆ. ಕರ್ತವ್ಯ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸಿಬ್ಬಂದಿಯು ಕಾರ್ಯ ಕ್ಷೇತ್ರದಲ್ಲಿ ಶಿಸ್ತು, ನಿಷ್ಠೆ ಮತ್ತು ಬದ್ಧತೆಯಿಂದ ಕೆಲಸ ಮಾಡಿ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಪ್ರಶಸ್ತಿ ಪಡೆಯುತ್ತಿರುವವರು ತಮ್ಮ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ರೈಲ್ವೆಗೆ ಮಾದರಿಯಾಗಿದ್ದಾರೆ. ಇಂತಹ ಸಾಧನೆಗಳು ಇತರ ಸಹೋದ್ಯೋಗಿಗಳಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.
ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್ ಹಾಗೂ ಇತರ ಶಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.