

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರು ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ಮಂಗಳವಾರದಂದು ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ತೋರಿದ ಜಾಗರೂಕತೆ, ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಮತ್ತು ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆ ಖಚಿತಪಡಿಸಿಕೊಳ್ಳುವಲ್ಲಿನ ಕೊಡುಗೆ ಗುರುತಿಸಿ ಐವರು ಉದ್ಯೋಗಿಗಳಿಗೆ ಇದೇ ಸಂದರ್ಭದಲ್ಲಿ ಸುರಕ್ಷತಾ ಪ್ರಶಸ್ತಿ ನೀಡಿ, ಸನ್ಮಾನಿಸಿದರು.
ಹುಬ್ಬಳ್ಳಿ ವಿಭಾಗದ ಶಿವಾಜಿ ಪವಾರ, ಬೆಂಗಳೂರು ವಿಭಾಗದ ಕೈಲಾಶ ಪ್ರಸಾದ ಮೀನಾ ಮತ್ತು ಎಚ್.ಎಸ್. ಮಹೇಶ, ಮೈಸೂರು ವಿಭಾಗದ ಜೆ.ಬಿ. ಲೋಹಿತ ಮತ್ತು ಅಬು ಸಾಲಿಯಾ ಅವರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಕುಲ್ ಸರನ್ ಮಾಥುರ್ ಅವರು, ಸಿಬ್ಬಂದಿಯ ತ್ವರಿತ ಚಿಂತನೆ ಮತ್ತು ಸಮರ್ಪಣಾ ಭಾವವನ್ನು ಶ್ಲಾಘಿಸಿದರು. "ಸುರಕ್ಷತೆ ಮೊದಲು ಮತ್ತು ಸುರಕ್ಷತೆ ಯಾವಾಗಲೂ' ಎಂಬ ನೈಋತ್ಯ ರೈಲ್ವೆಯ ಧ್ಯೇಯವನ್ನು ಪುನರುಚ್ಛರಿಸಿದರು.