ಅಂತರ್ಜಾಲ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ

udp-11-cyber
Published on

ಉಡುಪಿ: ಪ್ರತಿದಿನ ಹೊಸ ಹೊಸ ರೂಪದಲ್ಲಿ ಸೈಬರ್​ ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು, ಅಂತರ್ಜಾಲ ಬಳಕೆಯ ಸಮಯದಲ್ಲಿ ಜನ ಸಾಮಾನ್ಯರು ಎಚ್ಚರಿಸಿಕೆಯಿಂದ ವ್ಯವಹರಿಸಬೇಕು. ರ್ನಿಲಕ್ಷ್ಯ ವಹಿಸಿದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದರು.

ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರು ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಯಿಂದ ಡಿಜಿಟಲ್​ ಮೂಲಕ ಆರ್ಥಿಕ ವ್ಯವಹಾರಗಳನ್ನು ಹೆಚ್ಚು ಮಾಡುತ್ತಿದ್ದಾರೆ. ಇಂತಹ ವ್ಯವಹಾರಗಳನ್ನು ಮಾಡುವಾಗ ಜವಾಬ್ದಾರಿಯಿಂದ ನಿರ್ವಹಿಸಿಬೇಕು. ಜನಸಾಮಾನ್ಯರು ಅಲ್ಪ ಅವಧಿಯಲ್ಲಿಯೇ ಹೆಚ್ಚಿನ ಹಣವನ್ನು ದ್ವಿಗುಣಗೊಳಿಸುವ ಆಸೆಯಿಂದ ಹಣದ ಹೂಡಿಕೆಗಳನ್ನು ಕಂಪನಿಗಳ ಪೂರ್ವಾಪರ ಮಾಹಿತಿ ಪಡೆಯದೆ ಹಣ ಕಳೆದುಕೊಂಡ ನಿರ್ದೇಶನಗಳಿವೆ. ಇವುಗಳ ಬಗ್ಗೆ ಜಾಗೃತಿ ವಹಿಸಿದಾಗ ಮಾತ್ರ ಆರ್ಥಿಕ ನಷ್ಟದಿಂದ ಪಾರಾಗಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ ಸೈಬರ್​ ಅಪರಾಧಕ್ಕೆ 44 ಕೋಟಿ ರೂ. ನಷ್ಟ

ಜಿಲ್ಲಾ ಪೊಲೀಸ್​ ಅಧಿಕ್ಷಕ ಡಾ. ಅರುಣ್​ ಕೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸೈಬರ್​ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಾಂಪ್ರದಾಯಿಕ ಮೋಸದ ಅಪರಾಧಗಳಿಗಿಂತ ಕುಳಿತಲ್ಲಿಯೇ ಇಂಟರ್​ನೆಟ್​ ಬಳಕೆಯಿಂದ ಸೈಬರ್​ ಅಪರಾಧಗಳನ್ನು ಮಾಡುವುದರೊಂದಿಗೆ ಹೆಚ್ಚಿನ ಹಣ ಗಳಿಕೆ ಮಾಡುತ್ತಿದ್ದಾರೆ. ಸೈಬರ್​ ಅಪರಾಧದಲ್ಲಿ ಶೇ. 80 ರಷ್ಟು ಹಣಕಾಸಿನ ಮೋಸ ದಾಖಲಾಗಿವೆ. ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಾಂಪ್ರದಾಯಿಕ ಹಣಕಾಸಿನ ವಂಚನೆಯಿಂದ 4 ಕೋಟಿ ರೂ. ನಷ್ಟವಾಗಿದೆ. ಆದರೆ ಸೈಬರ್​ ಅಪರಾಧದಲ್ಲಿ 44 ಕೋಟಿ ರೂ. ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಜನರು ಆರ್ಥಿಕ ವಹಿವಾಟು ಮಾಡುವಾಗ ಎಚ್ಚರ ವಹಿಸುವುದು ಅವಶ್ಯ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿದರು. ಲೀಡ್​ಬ್ಯಾಂಕ್​ ಮ್ಯಾನೆಜರ್​ ಹರೀಶ್​ ಮಾತನಾಡಿದರು. ಮಣಿಪಾಲ ಪೊಲೀಸ್​ ಠಾಣೆಯ ಪೊಲೀಸ್​ ನಿರೀಕ್ಷಕ ದೇವರಾಜ್​ ಟಿ.ವಿ ಹಾಗೂ ಬೆಂಗಳೂರು ಎನ್​.ಐ.ಸಿ ಅಧಿಕಾರಿ ಬಾಲಚಂದ್ರ ಮಾಹಿತಿ ನೀಡಿದರು. ಎನ್​.ಐ.ಸಿ ಅಧಿಕಾರಿ ಉಮಾಮಹೇಶ್ವರಿ ಮತ್ತಿತರರು ಉಪಸ್ಥಿತರಿದ್ದರು. ಡಯಟ್​ ಉಪನ್ಯಾಸಕ ಡಾ. ಅಶೋಕ್​ ಕಾಮತ್​ ಸ್ವಾಗತಿಸಿ, ನಿರೂಪಿಸಿದರು.

ಸೈಬರ್​ ವಂಚಕರು ಬ್ಯಾಂಕ್​ ಖಾತೆಗಳಲ್ಲಿ ಹೆಚ್ಚಿನ ಹಣ ಹೊಂದಿರುವ ಸರ್ಕಾರಿ ನೌಕರರು ಹಾಗೂ ಇತರೆ ಶ್ರೀಮಂತ ವ್ಯಕ್ತಿಗಳ ಹಣವನ್ನು ಲೂಟಿಮಾಡಲು ಅವರ ದತ್ತಾಂಶಗಳನ್ನು ಇಂಟರ್​ನೆಟ್​ ಮೂಲಕ ಸರಳವಾಗಿ ಸಂಗ್ರಹಿಸಿ, ಮೋಸ ಮಾಡಲು ಸಂಚು ರೂಪಿಸುತ್ತಾರೆ. ಈ ಬಗ್ಗೆ ಜನಸಾಮಾನ್ಯರು ಜಾಗೃತಿ ವಹಿಸಬೇಕು. ಸುಳ್ಳು ಮಾಹಿತಿಗಳನ್ನು ಹಂಚಿಕೊಂಡು ಭಯ ಹುಟ್ಟಿಸಿ ಹಣ ಪಡೆಯಲು ಮುಂದಾಗುತ್ತಿದ್ದಾರೆ. ಮಂಜುನಾಥ್​ ಭಂಡಾರಿ, ಶಾಸಕ, ವಿಧಾನಪರಿಷತ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net