

ನೆಲಮಂಗಲ: ಸರ್ಕಾರಿ ಜಮೀನನ್ನು ರಕ್ಷಿಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾಗ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಅವರು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ನೂರಾರು ಎಕರೆ ಸರ್ಕಾರದ ಗೋಮಾಳ ಜಾಗವಿದೆ. ಆ ಭೂಮಿಯನ್ನು ಭೂಗಳ್ಳರಿಂದ ಅಧಿಕಾರಿಗಳು ರಕ್ಷಿಸಬೇಕಿದೆ. ಕೆಲ ವ್ಯಕ್ತಿಗಳು ಸ್ಮಶಾನಕ್ಕೆ ಮೀಸಲಿರಿಸಿದ್ದ ಜಾಗವನ್ನೂ ಒತ್ತುವರಿ ಮಾಡಿದ್ದು, ರಾಜಸ್ವ ನಿರೀಕ್ಷಿಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ, ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಸ್ಮಶಾನವಿಲ್ಲದ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಒಂದಷ್ಟು ಭಾಗವನ್ನು ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಘನತ್ಯಾಜ್ಯ ವಿಂಗಡಣೆಗೆ ಒತ್ತು: ಜಿಲ್ಲೆಯಾದ್ಯಂತ ಘನತ್ಯಾಜ್ಯಕ್ಕೆ ವಿಂಗಡಣೆ ಹೆಚ್ಚು ಒತ್ತು ನೀಡಿದ್ದು, ಈಗಾಗಲೇ ತಾಲೂಕಿನಲ್ಲಿ 6 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಂಗಡಣೆ ಕೇಂದ್ರ ಗುರುತಿಸಲಾಗಿದೆ. ತಾಲೂಕು ಆಡಳಿದಿಂದ ಅಂಗವಿಕಲರಿಗೆ ಕೃತಕ ಅಂಗಜೋಡಣೆ ಮಾಡಿಸಬೇಕು. ತಾಲೂಕಿನಲ್ಲಿ ಯಾವುದಾದರು ಒಂದು ಗ್ರಾಮವನ್ನು ಕಂದಾಯ ಗ್ರಾಮವಾಗಿ ಗುರುತಿಸಿಕೊಳ್ಳಬೇಕು ಎಂದರು.
ಅನಧಿಕೃತ ಬಡಾವಣೆಗಳ ತೆರವು: ತಾಲೂಕಿನಾದ್ಯಂತ ಅಂದಾಜು 641 ಅನಧಿಕೃತ ಬಡಾವಣೆ ಗುರುತಿಸಲಾಗಿದೆ. ಕೃಷಿ ಭೂಮಿಯಲ್ಲಿ ಬಡಾವಣೆ ನಿರ್ಮಾಣ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕೂಡಲೆ ಅಂಥ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡಿ, ತೆರವುಗೊಳಿಸಬೇಕು ಎಂದು ಕೆ.ಶ್ರೀನಿವಾಸ್ ಸೂಚನೆ ನೀಡಿದರು.
ಜನಪ್ರತಿನಿಧಿಗಳಿಂದ ಬೆದರಿಕೆ: ಜಿಲ್ಲಾಧಿಕಾರಿಗಳ ಆದೇಶದಂತೆ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಿದ್ದ ಬಡಾವಣೆಗಳನ್ನು ತೆರವು ಮಾಡಲು ಮುಂದಾಗಿದ್ದ ನಿಕಟಪೂರ್ವ ತಹಸೀಲ್ದಾರ್ಗೆ ತಾಲೂಕಿನ ಕೆಲ ಜನಪ್ರತಿನಿಧಿಗಳು ಹಾಗೂ ಲ್ಯಾಂಡ್ ಡೆವಲಪರ್ಗಳು ಧಮ್ಕಿ ಹಾಕಿದ್ದರು ಎಂದು ಗ್ರಾಮ ಲೆಕ್ಕಿಗರೊಬ್ಬರು ಡಿಸಿ ಅವರ ಗಮನಕ್ಕೆ ತಂದರು.
ಲಸಿಕಾ ಕೇಂದ್ರಕ್ಕೆ ಭೇಟಿ: ಸಭೆಯ ಬಳಿಕ ಡಿಸಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 2 ಹಂತದ ಸೋಂಕಿನಲ್ಲಿ ರೂಪಾಂತರಿ ವೈರಾಣು ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಎಲ್ಲರೂ ಕರೊನಾ ಮಾರ್ಗಸೂಚಿ ಪಾಲಿಸಬೇಕು ಎಂದರು.
ಗ್ರಾಮ ಲೆಕ್ಕಿಗರ ಮನವಿ: ತಾಲೂಕಿನಾದ್ಯಂತ ಹತ್ತಾರು ಗ್ರಾಮಲೆಕ್ಕಿಗರಿದ್ದು, ಅವರ ಅನುಕೂಲಕ್ಕಾಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಗ್ರಾಮಲೆಕ್ಕಿಗ ಬಾಲಕೃಷ್ಣ ಅವರು ಡಿಸಿಗೆ ಮನವಿ ಮಾಡಿಕೊಂಡರು.
ತಾಲೂಕು ಆಡಳಿತ ಡಿಸಿ ಕೆ.ಶ್ರೀನಿವಾಸ್ ಅವರನ್ನು ಸನ್ಮಾನಿಸಿರು. ತಹಸೀಲ್ದಾರ್ ಕೆ.ಮಂಜುನಾಥ್, ವಿಶೇಷ ತಹಸೀಲ್ದಾರ್ ಪ್ರಕಾಶ್, ಕಂದಾಯ ಶಿರಸ್ತೇದಾರ್ ಶ್ರೀನಿವಾಸ್ವುೂರ್ತಿ, ತಾಲೂಕು ಚುನಾವಣಾ ಶಿರಸ್ತೇದಾರ್ ಸುದೀಪ್, ರಾಜಸ್ವನಿರೀಕ್ಷಕ ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಹರೀಶ್, ವೈದ್ಯಾಧಿಕಾರಿ ನರಸಿಂಹಯ್ಯ ಮತ್ತಿತರರು ಇದ್ದರು.
36 ಕೋಟಿ ರೂ. ಅನುದಾನಕ್ಕೆ ಮನವಿ: ಜಿಲ್ಲೆಯಲ್ಲಿ ಶಾಸಕರನ್ನು ಒಳಗೊಂಡು ಸಭೆ ಕರೆದು ಬೇಸಿಗೆಗೆ ಸಂಬಂಧಿಸಿದಂತೆ ರ್ಚಚಿಸಿ ಸರ್ಕಾರಕ್ಕೆ 36 ಕೋಟಿ ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿ ಶಾಸಕರ ಅನುದಾನ ಹಾಗೂ ಜಿಪಂ ಅನುದಾನದಲ್ಲಿ ಬೋರ್ವೆಲ್ ಕೊರೆಸಲಾಗುವುದು. ಆಕ್ರಮ ಕಲ್ಲುಗಣಿಗಾರಿಕೆ ಹೆಚ್ಚಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಕಾರ್ಯಪಡೆ ರಚಿಸಲಾಗಿದೆ. ನಗರಸಭೆ ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ 43 ಆಕ್ಷೇಪಣೆಗಳು ಬಂದಿವೆ. ಅವುಗಳನ್ನು ಪರಿಶೀಲಿಸಲಾಗುವುದು ಎಂದು ಡಿಸಿ ತಿಳಿಸಿದರು.