ಸೊಳ್ಳೆಗಳ ನಿಯಂತ್ರಣದಿಂದ ಸುರಕ್ಷಿತ ಆರೋಗ್ಯ

TKE 1 (MALERIA)
Published on

ತರೀಕೆರೆ: ಸೊಳ್ಳೆಗಳ ನಿಯಂತ್ರಣದಿಂದ ಆರೋಗ್ಯ ಸುರಕ್ಷಿತ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಹೇಳಿದರು. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಲೇರಿಯಾ ದಿನ ಹಾಗೂ ಅಗ್ನಿ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಜನತೆಯ ಆರೋಗ್ಯ ಕಾಪಾಡಲು ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಜತೆ ಕುಟುಂಬದವರ ಆರೋಗ್ಯದ ಕಾಳಜಿ ವಹಿಸಬೇಕು. ತಾಲೂಕಿನಲ್ಲಿ ಸದ್ಯಕ್ಕೆ ಮಲೇರಿಯಾ ಪ್ರಕರಣ ಇಲ್ಲವಾದರೂ, ಜನತೆ ಸೊಳ್ಳೆ ಪರದೆ ಬಳಸಿ ರೋಗ ಹರಡುವಿಕೆ ತಡೆಗಟ್ಟಬೇಕು. ಸಮತೋಲನ ಪೌಷ್ಟಿಕ ಆಹಾರ ಸೇವನೆ ಮತ್ತು ದಿನದ ಕೆಲ ಸಮಯ ದೈಹಿಕ ಚಟುವಟಿಕೆಗೆ ಮೀಸಲಿರಿಸಿ ಆರೋಗ್ಯ ಉತ್ತಮಗೊಳಿಸಿಕೊಳ್ಳಬೇಕು ಎಂದರು.

ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಮಾತನಾಡಿ, ಮಲೇರಿಯಾ ಹರಡುವಿಕೆ, ತಡೆಗಟ್ಟುವಿಕೆ ಜತೆ ಸೊಳ್ಳೆ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಅಗ್ನಿಶಾಮಕ ದಳದ ಠಾಣಾಧಿಾರಿ ನಾಗೇಂದ್ರಪ್ಪ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ಬೇಸಿಗೆಯಲ್ಲಿ ಬೆಂಕಿ ಹತ್ತಿಕೊಳ್ಳುವ ಪ್ರಸಂಗಗಳು ಹೆಚ್ಚು. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿ ಅವಘಡ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಬೆಟ್ಟದಹಳ್ಳಿ ಪಿಎಚ್‌ಸಿ ಆರೋಗ್ಯ ವೈದ್ಯಾಧಿಕಾರಿ ಡಾ.ರವಿಶಂಕರ್, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಾಲಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಶಿವಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net