ಕರೊನಾ ಸಂದರ್ಭದಲ್ಲಿ ಸುರಕ್ಷಿತ ಹೆರಿಗೆ ; ರಾಮನಗರ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ 776 ಮಕ್ಕಳ ಜನನ

16-05-rama-herige
Published on

ರಾಮನಗರ : ಕರೊನಾ ಜೀವ ಕಳೆಯುವ ಸುದ್ದಿಗಳನ್ನೇ ಹೆಚ್ಚು ನೀಡುತ್ತಿದೆ. ಆದರೆ, ಇದರ ನಡುವೆ ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳೂ ಪ್ರಪಂಚಕ್ಕೆ ಕಾಲಿಟ್ಟಿದ್ದು, ಸದ್ದಿಲ್ಲದೆ, ಈ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಕರೊನಾ ಸಂದರ್ಭದಲ್ಲಿ ಕರೊನಾ ಹೊರತಾದ ಇತರ ರೋಗಿಗಳನ್ನು ಪರೀಕ್ಷೆ ಮಾಡುವುದು ಕಷ್ಟದ ಕೆಲಸವಾಗಿದೆ. ಆದರೆ ಅವಧಿ ಪೂರ್ಣಗೊಳಿಸಿದ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲೇಬೇಕಾದ ಅನಿವಾರ್ಯತೆ ಇದ್ದು, ಕರೊನಾ ಸೋಂಕಿತ ಗರ್ಭಿಣಿಯರಿಗೂ ಸುರಕ್ಷಿತವಾಗಿ ಲಸಿಕೆ ಕೊಡಿಸುವ ಮೂಲಕ ವೈದ್ಯರು ಮತ್ತೊಮ್ಮೆ ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತನ್ನು ಸಾಬೀತುಪಡಿಸಿದ್ದಾರೆ.

ಜಿಲ್ಲೆಯಲ್ಲಿ 700 ಹೆರಿಗೆ : ರಾಜ್ಯದಲ್ಲಿ ಕರೊನಾ ಆರ್ಭಟ ಆರಂಭಗೊಂಡು ಸುಮಾರು ಒಂದು ತಿಂಗಳು ಕಳೆಯುತ್ತಿದೆ. ಏಪ್ರಿಲ್‌ನಲ್ಲಿ ಇದರ ಪ್ರಮಾಣ ಹೆಚ್ಚಾಗಿ ಸೋಂಕಿತರ ಸಂಖ್ಯೆಯಲ್ಲೂ ಏರಿಕೆ ಕಂಡಿತು. ಆದರೆ ಈ ವೇಳೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 776 ಹೆರಿಗೆಗಳಾಗಿವೆ. ಇದರಲ್ಲಿ ಅತಿ ಹೆಚ್ಚು ರಾಮನಗರದಲ್ಲಿ ಆಗಿದ್ದು, ಇಲ್ಲಿ ಒಟ್ಟು 303 ಹೆರಿಗೆಗಳಾಗಿದೆ. ಕನಕಪುರದಲ್ಲಿ 213, ಚನ್ನಪಟ್ಟಣದಲ್ಲಿ 170 ಮತ್ತು

ಮಾಗಡಿಯಲ್ಲಿ 90 ಹೆರಿಗೆಗಳು ಆಗಿವೆ.

ಪ್ರತ್ಯೇಕತೆ : ಗರ್ಭಿಣಿಯರಿಗೆ ಕರೊನಾ ಸೋಂಕು ತಗುಲಿದರೆ ಅಂತಹವರ ಬಗ್ಗೆ ಹೆಚ್ಚು ನಿಗಾ ಇಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಎರಡು ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಆರೈಕೆ ಕೇಂದ್ರ ತೆರೆಯಲಾಗಿದೆ. ಹೆರಿಗೆಗೆ ಇನ್ನೂ ಹೆಚ್ಚು ಸಮಯ ಇರುವ ಗರ್ಭಿಣಿಯರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿದರೆ, ಹೆರಿಗೆಗೆ ಬಳಕೆ ಮಾಡುವ ಯಾವುದೇ ವಸ್ತುವನ್ನು ಮತ್ತೊಬ್ಬರಿಗೆ ಹೆರಿಗೆ ಮಾಡಿಸಲು ತಕ್ಷಣವೇ ಬಳಸುವಂತಿಲ್ಲ. ಸಂಪೂರ್ಣ ಆಪರೇಷನ್ ಕೊಠಡಿಯನ್ನೇ ಸ್ಯಾನಿಟೈಸ್ ಮಾಡಲಾಗುತ್ತದೆ. ಇಂತಹ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆರಿಗೆ ಮಾಡಿಸುವ ಕೆಲಸ ಆರೋಗ್ಯ ಇಲಾಖೆಯಲ್ಲಿ ಸದ್ದಿಲ್ಲದೆ ಸಾಗಿದೆ.

ಸೋಂಕಿತರಿಗೂ ಹೆರಿಗೆ : ಸಾಮಾನ್ಯವಾಗಿ ಕರೊನಾ ವ್ಯಾಪಿಸಿದ ನಂತರ ಹೆರಿಗೆಗೂ ಮುನ್ನ ಗರ್ಭಿಣಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನೆಗೆಟಿವ್ ವರದಿ ಪಡೆದ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲಾಗುತ್ತದೆ. ಆದರೆ ಅದೆಷ್ಟೋ ಗರ್ಭಿಣಿಯರಿಗೆ ಸೋಂಕು ತಗುಲಿರುವುದು ಪರೀಕ್ಷೆಗೆ ಒಳಪಡುವವರೆಗೂ ಗೊತ್ತೇ ಇರುವುದಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಪ್ರಸವ ದಿನಾಂಕ ಹತ್ತಿರದಲ್ಲಿಯೇ ಇದ್ದರೆ ಅಥವಾ ಪ್ರಸವ ವೇದನೆ ಆರಂಭಗೊಂಡಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮ ಎಲ್ಲ ಅನುಭವವನ್ನು ಧಾರೆ ಎರೆದು ಹೆರಿಗೆ ಮಾಡಿಸುವ ಯತ್ನಕ್ಕೆ ಮುಂದಾಗಿ ಯಶಸ್ವಿಯೂ ಆಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಕರೊನಾ ಸಂಕಷ್ಟದ ನಡುವೆಯೂ ಹೆರಿಗೆ ಮಾಡಿಸುವಂತಹ ಉತ್ತಮ ಕೆಲಸವನ್ನು ನಮ್ಮ ವೈದ್ಯರು ಮಾಡಿಕೊಂಡು ಬರುತ್ತಿದ್ದಾರೆ. ಸಾಕಷ್ಟು ಗರ್ಭಿಣಿಯರಿಗೆ ಕರೊನಾ ಸೋಂಕು ತಗುಲಿದ್ದು, ಇವರಲ್ಲಿ ಹಲವರಿಗೆ ಶಸಚಿಕಿತ್ಸೆ ಮೂಲಕ ಮತ್ತೆ ಕೆಲವರಿಗೆ ಸಾಮಾನ್ಯ ಹೆರಿಗೆ ಆಗಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಧೈರ್ಯದಿಂದ ವರ್ತಿಸಿದ್ದಾರೆ. ಅವರಿಗೆ ಧನ್ಯವಾದಗಳು. ಡಾ.ಪದ್ಮಾ ಜಿಲ್ಲಾ ಆರ್‌ಸಿಎಚ್ ಅಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net