ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಬಂದ್ : ಸರ್ಕಾರ ಆದೇಶ

Safari vvani
Published on

ಮೈಸೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ ದಾಳಿಯಿಂದ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ಹಾಗೂ ಚಾರಣವನ್ನು ಸ್ಥಗಿತಗೊಳಿಸಲು ಆದೇಶಿಸಿದೆ.

ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಶುಕ್ರವಾರ ರೈತ ಚೌಡನಾಯಕ ಹುಲಿ ದಾಳಿಯಿಂದ ಮೃತಪಟ್ಟಿದ್ದು, ಇದರೊಂದಿಗೆ ಹುಲಿ ದಾಳಿಯಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಹುಲಿ ದಾಳಿಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟ ಸಂದರ್ಭದಲ್ಲಿಯೇ ಸಫಾರಿ ಬಂದ್‌ಗೊಳಿಸಬೇಕು ಹಾಗೂ ಅಕ್ರಮವಾಗಿ ಅರಣ್ಯದಂಚಿನಲ್ಲಿ ನಿರ್ಮಾಣವಾಗಿರುವ ರೆಸಾರ್ಟ್‌ಗಳನ್ನು ಬಂದ್ ಮಾಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು.

ಹುಲಿ ದಾಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಬಂಡೀಪುರದಲ್ಲಿ ಅ.27 ರಂದು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ನಂತರ ನ.2 ರಂದು ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಗಳು ಹಾಗೂ ರೈತರೊಂದಿಗೆ ಸಚಿವರು ಸಂವಾದ ನಡೆಸಿದ್ದರು. ಆ ಸಂದರ್ಭ ಸಫಾರಿ ಬಂದ್ ಮಾಡಬೇಕು ಎಂಬ ಒತ್ತಾಯ ರೈತರಿಂದ ತೀವ್ರವಾಗಿ ಕೇಳಿ ಬಂದಿತ್ತು.

ಹಳೆಹೆಗ್ಗುಡಿಲು ಗ್ರಾಮದಲ್ಲಿ ಶುಕ್ರವಾರ ರೈತ ಚೌಡನಾಯಕ ಮೃತಪಟ್ಟ ನಂತರ ಸರ್ಕಾರದ ವಿರುದ್ಧ ಮತ್ತೆ ಆಕ್ರೋಶ ಬುಗಿಲೆದ್ದಿದೆ. ಹೀಗಾಗಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಶುಕ್ರವಾರದಿಂದಲೇ ಬಂಡಿಪುರ ಹಾಗೂ ನಾಗರಹೊಳೆಯಲ್ಲಿ ಮುಂದಿನ ಆದೇಶದವರೆಗೆ ಸಫಾರಿ ಸ್ಥಗಿತಕ್ಕೆ ಆದೇಶ ಹೊರಡಿಸಿದ್ದಾರೆ. ಬಂಡಿಪುರ ಹಾಗೂ ನಾಗರಹೊಳೆಯ ಸಫಾರಿ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಬೇಕು. ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಹಾಗೂ ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಹುಲಿ ಸೆರೆಗೆ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net