

ಮಂಡ್ಯ: ಮನುಷ್ಯನ ದುರಾಸೆ, ಸ್ವಾರ್ಥ ಲಾಲಸೆಯಿಂದಾಗಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ವಿಷಾದಿಸಿದರು.
ನಗರದ ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕಲಾಸಿರಿ ಸಾಂಸ್ಕೃತಿಕ ಹಾಗೂ ಚಿಣ್ಣರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆಲ್ಲ ಜಾತ್ರೆ, ಉತ್ಸವಗಳು ರಾತ್ರಿಯಿಡೀ ಜನಪದರ ಸಂಭ್ರಮದಿಂದ ಒಟ್ಟುಗೂಡಿ ನಡೆಯುತ್ತಿದ್ದವು. ಆದರೆ ಇಂದು ಸ್ವಾರ್ಥದಿಂದಾಗಿ ಸಹಬಾಳ್ವೆ, ಸಾಮರಸ್ಯದಿಂದ ಹೊರಬಂದು ದುರಂತದ ದಿನಗಳನ್ನು ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ತಳ ಸಮುದಾಯದ ಜನಪದರು ಕಟ್ಟಿ ಬೆಳೆಸಿದ ಹಲವಾರು ಕಲಾಪ್ರಕಾರಗಳು ನಶಿಸಿ ಹೋಗುತ್ತಿವೆ. ಇದರಲ್ಲಿ ಮೂಡಲಪಾಯ ಯಕ್ಷಗಾನ ಕೂಡ ಕಣ್ಮರೆಯಾಗುವ ಹಂತಕ್ಕೆ ತಲುಪಿತ್ತು. ಇದನ್ನ ಕಂಡ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು ಈ ಕಲೆಯನ್ನು ಹೇಗಾದರೂ ಮಾಡಿ ಉಳಿಸಿ ಬೆಳೆಸುವ ಅಗತ್ಯತೆ ಇದೆ ಎಂಬುದನ್ನು ಮನಗಂಡು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದರು. ಅದರ ಫಲವಾಗಿ ಇಂದು ಮೂಡಲಪಾಯ ಯಕ್ಷಗಾನ ಜೀವಂತಿಕೆಯನ್ನು ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.
ಹಲವಾರು ಶಿಕ್ಷಣ ಸಂಸ್ಥೆಗಳು ಒಳ್ಳೆಯ ಹೆಸರುಗಳನ್ನು ಇಟ್ಟು ಪಾಲಕರಗಳನ್ನು ಆಕರ್ಷಿಸುತ್ತಾರೆ. ಆದರೆ, ಸದ್ವಿದ್ಯಾ ಸಂಸ್ಥೆಯ ಅಧ್ಯಕ್ಷ ಹರೀಶ್ ಕುಮಾರ್ ಅವರು ಒಳ್ಳೆಯ ಹೆಸರನ್ನು ಇಟ್ಟು ಜಾನಪದದ ಪ್ರಕಾರಗಳನ್ನು ಮಕ್ಕಳಿಂದ ಮಾಡಿಸುವಂತಹ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಾನಪದ ಕಲೆಗಳಲ್ಲಿ ನೃತ್ಯಗಳನ್ನು ಪ್ರದರ್ಶಿಸುವುದು ಸಾಮಾನ್ಯ ಸಂಗತಿಯಲ್ಲ. ಪಟವನ್ನ ತಲೆಯ ಮೇಲೆ ಹೊತ್ತು ತಮಟೆಯ ಸದ್ದಿಗೆ ಹೆಜ್ಜೆ ಹಾಕುವುದು ತುಂಬಾ ಕಷ್ಟದ ಕೆಲಸ. ಇಂತಹ ಜನಪದವನ್ನು ಹೆಣ್ಣು ಮಕ್ಕಳು ತುಂಬಾ ಸೊಗಸಾಗಿ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಶಿಕ್ಷಣ ಸಂಸ್ಥೆಯ ಟ್ರಸ್ಟಿ ಕೃಷ್ಣಪ್ಪ, ಕಾರ್ಯದರ್ಶಿ ರತ್ನಶ್ರೀ, ಮುಖ್ಯಸ್ಥರಾದ ಫಣಿಮಾಲ, ಬಿ.ಸುನೀಲ್, ಮುಖ್ಯ ಶಿಕ್ಷಕಿಯರಾದ ಬಿ.ಎಸ್. ಗೀತಾ, ಬಿ.ಆರ್.ಶುಭ ಭಾಗವಹಿಸಿದ್ದರು.