

ಆಲಮೇಲ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸಾದೀಕ ಸುಂಬಡ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಸುಮಾ ಕತ್ತಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು. ತಹಸೀಲ್ದಾರ್ ಕೆ.ವಿಜಯಕುಮಾರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಒಟ್ಟು 19 ಸದಸ್ಯರ ಬಲದ ಆಲಮೇಲ ಪಟ್ಟಣ ಪಂಚಾಯಿತಿಯಲ್ಲಿ 18 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ವಾರ್ಡ್ 15ರ ಪಕ್ಷೇತರ ಸದಸ್ಯ ಗೈರಾಗಿದ್ದರು. ಒಟ್ಟು 19 ಸದಸ್ಯರಲ್ಲಿ 9 ಬಿಜೆಪಿ, 7 ಕಾಂಗ್ರೆಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ.
ಶಾಸಕ ಅಶೋಕ ಮನಗೂಳಿ ಸುದ್ದಿಗಾರರೊಂದಿಗೆ ಮಾತನಾಡಿ, ಆಲಮೇಲ ನೂತನ ತಾಲೂಕು ಕೇಂದ್ರವಾಗಿದ್ದು, ಜಿಲ್ಲೆಯಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದೆ. ತಾಲೂಕು ಅಭಿವೃದ್ಧಿಗಾಗಿ ನನ್ನ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರಲಾಗಿದೆ ಎಂದರು.
ಪಪಂ ನೂತನ ಅಧ್ಯಕ್ಷ ಸಾದೀಕ ಸುಂಬಡ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷೇತರ ಸದಸ್ಯರು ನಮಗೆ ಬೆಂಬಲಿಸುವ ನಿರೀಕ್ಷೆಯಲ್ಲಿದ್ದೇವು. ಆದರೆ ಅವರು ನಮಗೆ ಬೆಂಬಲಿಸದ ಕಾರಣ ನಮ್ಮ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದರು.
ಅಧ್ಯಕ್ಷ- ಉಪಾಧ್ಯಕ್ಷರ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ಅಧಿಕಾರಿ ಎಂ.ಎ.ಅತ್ತಾರ, ಪಪಂ ಸದಸ್ಯರು, ಸಿಬ್ಬಂದಿ ಹಾಗೂ ಪೊಲೀಸರು ಇದ್ದರು.