

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಜ.18 ರಂದು 7, 8 ಮತ್ತು 9ನೇ ಘಟಿಕೋತ್ಸವ ಆಯೋಜಿಸಿದ್ದು, ನಟ ಸಾಧು ಕೋಕಿಲಾ, ಗಿರಿಜಾ ಲೋಕೇಶ್ ಸೇರಿದಂತೆ 9 ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಕುಲಪತಿ ಪೊರ.ನಾಗೇಶ್ ವಿ.ಬೆಟ್ಟಕೋಟೆ ಹೇಳಿದರು.
2021-22, 2022-23, 2023-24ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಸೇರಿದಂತೆ ಒಟ್ಟು 540 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 14 ವಿದ್ಯಾರ್ಥಿಗಳಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಗುವುದು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 27 ವಿದ್ಯಾರ್ಥಿಗಳಿಗೆ 69 ಚಿನ್ನದ ಪದಕಗಳನ್ನು ನೀಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾರಿಗೆಲ್ಲ ಡಾಕ್ಟರೇಟ್?: ಹಾಸ್ಯನಟ ಸಾಧು ಕೋಕಿಲಾ(ಪ್ರದರ್ಶಕ ಕಲೆ), ನಟಿ ಗಿರಿಜಾ ಲೋಕೇಶ್(ರಂಗಭೂಮಿ), ಸತ್ಯನಾರಾಯಣ ರಾಜು (ಭಾರತೀಯ ಶಾಸ್ತ್ರೀಯ ನೃತ್ಯ), ಸಿ. ಚೆಲುವರಾಜು (ಮೃದಂಗ), ಡಾ.ಸಂಧ್ಯಾ ಪುರೆಚ್ಚ (ಭಾರತೀಯ ಶಾಸ್ತ್ರೀಯ ನೃತ್ಯ), ಎಂ.ಆರ್. ಸತ್ಯನಾರಾಯಣ (ಗಮಕ), ವೀಣಾ ಮೂರ್ತಿ ವಿಜಯ್ (ಭಾರತೀಯ ನೃತ್ಯ), ಪುಷ್ಪಾ ಶ್ರೀನಿವಾಸನ್ (ಕರ್ನಾಟಕ ಸಂಗೀತ), ಸಿ.ಬಸವಲಿಂಗಯ್ಯ (ರಂಗಭೂಮಿ) ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದರು.
ಜ.18 ರಂದು ಮಧ್ಯಾಹ್ನ 3ಕ್ಕೆ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಲಾಗುವುದು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನಾಡನಹಳ್ಳಿ ಸಂಗೀತ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಒಟ್ಟು 10 ಕೋಟಿ ರೂ.ವೆಚ್ಚದಲ್ಲಿ ಆಡಳಿತ ಭವನ ಹಾಗೂ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.