

ಗೋಕರ್ಣ: ಭಾರತದ ಜಿಪ್ಸಿಗಳೆಂದು ಕರೆಯಲಾಗುತ್ತಿದ್ದ ಮುಗ್ಧ ಅಲೆಮಾರಿ ಬಂಜಾರ ಸಮಾಜವನ್ನು ಏಕತ್ರವಾಗಿಸಿದ ಕೀರ್ತಿ ಸದ್ಗುರು ಸಂತ ಸೇವಾಲಾಲ್ ಅವರಾಗಿದ್ದಾಗಿದೆ. ತಮ್ಮ ಅವಿರತ ಪರಿಶ್ರಮದ ಮೂಲಕ ಈ ಸಮಾಜವನ್ನು ಆವರಿಸಿದ್ದ ಅಂಧಕಾರವನ್ನು ತೊಡೆದು ಹಾಕಿ ನವ ಜ್ಞಾನ ಜ್ಯೋತಿಯನ್ನು ಬೆಳಗಿದ ಸೇವಾಲಾಲ್ ಗುರುವರ್ಯರಿಂದಾಗಿ ಬಂಜಾರ ಜನಾಂಗ ಇವತ್ತಿಗೂ ಈ ದೇಶದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಯಿತು ಎಂದು ಶ್ರೀ ಸದ್ಗುರು ಸೇವಾಲಾಲ್ ಗೋರ ಬಂಜಾರ ಸಂಘದ ಗೌರವಾಧ್ಯಕ್ಷ, ಉಪನ್ಯಾಸಕ ಎನ್.ಎಸ್. ಲಮಾಣಿ ಹೇಳಿದರು.
ಸಂಘದ ವತಿಯಿಂದ ಶನಿವಾರ ಸಂತ ಸೇವಾಲಾಲ್ ಅವರ 286ನೇ ಜಯಂತ್ಯುತ್ಸವ ನಿಮಿತ್ತ ಇಲ್ಲಿನ ಶ್ರೀ ವೀರಶೈವ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸಂತ ಸೇವಾಲಾಲರ ಜೀವನ ಚರಿತ್ರೆ ಕುರಿತು ಪ್ರವಚನ ನೀಡಿದರು.
ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ ಜನ್ನು, ಪ್ರಭಾಕರ ಪ್ರಸಾದ, ಗಣಪತಿ ನಾಯ್ಕ, ಬಿಜೆಪಿ ಪ್ರಮುಖ ಕುಮಾರ ಮಾರ್ಕಾಂಡೆ ಸಂತ ಸೇವಾಲಾಲರ ಕುರಿತು ಮಾತನಾಡಿದರು. ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಾಧ್ಯಾಪಕ ಸಿ.ಜಿ. ನಾಯಕದೊರೆ, ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ, ಉಪತಹಸೀಲ್ದಾರ್ ಗಾಣಿಗೇರ, ಪಿಎಸ್ಐ ಖಾದರ ಬಾಷಾ, ನಾಗೇಶ ಸೂರಿ, ಇತರರಿದ್ದರು.
ಸಂಘದ ಗೌರವ ಸಲಹೆಗಾರ, ಪ್ರಾಚಾರ್ಯ ಎಸ್.ಸಿ. ನಾಯಕ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಶಿವು ನಾಯ್ಕ, ಕಾರ್ಯದರ್ಶಿ ಅಣ್ಣಯ್ಯ ಲಮಾಣಿ, ಖಜಾಂಚಿ ರವಿ ಲಮಾಣಿ, ಸಂಘಟನಾ ಕಾರ್ಯದರ್ಶಿ ಗೋವಿಂದ ಪೂಜಾರ, ಭಗತ್ ನಾಗರಾಜ ಪೂಜಾರ, ವಿಶ್ವನಾಥ ಬೇವಿನಕಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬಂಜಾರ ಸಂಸ್ಕೃತಿಯನ್ನು ಪರಿಚಯಿಸುವ ನೃತ್ಯ,ಗಾಯನ ಮುಂತಾದ ವೈವಿಧ್ಯಮಯ ಕಲೆಗಳ ಪ್ರದರ್ಶನ ಮತ್ತು ಗಣ್ಯರ ಸನ್ಮಾನ ನಡೆಯಿತು.