ಸದ್ಗುರು ಸಿದ್ದೇಶ್ವರರ ರಥೋತ್ಸವ

h31-siddappajja
Published on

ಹುಬ್ಬಳ್ಳಿ: ಉಣಕಲ್ ಹೊಸಮಠದ ಶ್ರೀ ಸದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ರಥೋತ್ಸವವು ನಗರದಲ್ಲಿ ಭಾನುವಾರ ಅದ್ದೂರಿಯಿಂದ ಜರುಗಿತು.

ಬೆಳಗ್ಗೆ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜೆ, ಶ್ರೀಮಠದ ಕೈಲಾಸ ಮಂಟಪದಲ್ಲಿ ಸಾಮೂಹಿಕ ಲಿಂಗದೀಕ್ಷೆಯು ಬ್ಯಾಹಟ್ಟಿಯ ಪುಟ್ಟದೇವರು ಸಮ್ಮುಖದಲ್ಲಿ ಜರುಗಿತು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಜರುಗಿತು. ಮಧ್ಯಾಹ್ನ 2ಗಂಟೆಗೆ ಸದ್ಗುರುಗಳ ಮೂರ್ತಿಯೊಂದಿಗೆ ಪಲ್ಲಕ್ಕಿ ಮೆರವಣಿಗೆಯು ಉಣಕಲ್‌ನ ಪ್ರಮುಖ ದೇವಸ್ಥಾನಗಳು, ಮಠಗಳಿಗೆ ತೆರಳಿ ಮರಳಿ ಶ್ರೀಮಠ ತಲುಪಿತು. ಸಂಜೆ 5ಕ್ಕೆ ಮಹಾಪೂಜೆಯೊಂದಿಗೆ ಅಸಂಖ್ಯಾ ಭಕ್ತರ ಮಧ್ಯೆ ರಥೋತ್ಸವ ಜರುಗಿತು.

ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ‘ಸಿದ್ಧೇಶ್ವರ ಮಹಾರಾಜ ಕೀ ಜೈ’ ಘೋಷಣೆ ಕೂಗಿದರು. ಜಾಂಜ್ ಮೇಳ, ಕರಡಿ ಮಜಲು, ಡೊಳ್ಳೂ ಕುಣಿತವು ರಥೋತ್ಸವಕ್ಕೆ ಇನ್ನಷ್ಟು ಮೆರಗು ತಂದವು. ರಥೋತ್ಸವದ ಮಾರ್ಗದಲ್ಲಿ ಶಿರಗುಪ್ಪಿಯ ವಿದ್ಯಾನಿಧಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ಮಲ್ಲಕಂಬ, ಯೋಗಾಸನ ಪ್ರದರ್ಶನ ಆಕರ್ಷಣೀಯವಾಗಿತ್ತು.

ಶ್ರೀಮಠದ ಪಂಚ ಕಮಿಟಿ ಅಧ್ಯಕ್ಷ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ತಿಪ್ಪಣ್ಣ ಮಜ್ಜಗಿ, ಗಣ್ಯರಾದ ಅನಿಲಕುಮಾರ ಪಾಟೀಲ, ಚನ್ನು ಪಾಟೀಲ, ರಾಮಣ್ಣ ಪದ್ಮಣ್ಣನವರ, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಮೆಣಸಿನಕಾಯಿ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net