

ಯಡ್ರಾಮಿ: ಸುಕ್ಷೇತ್ರ ಕಾಖಂಡಕಿಯಲ್ಲಿ ಸದ್ಗುರು ಶ್ರೀ ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ಸುರಿಯುತ್ತಿದ್ದ ಭಾರಿ ಮಳೆಯಲ್ಲೇ ಭಕ್ತರು ಜೈಘೋಷಗಳನ್ನು ಮೊಳಗಿಸುತ್ತ ರಥವನ್ನು ಎಳೆದು ಭಕ್ತಿ ಮೆರೆದರು.
ಪದ್ಧತಿಯಂತೆ ಸಂಜೆ ೬ಕ್ಕೆ ರಥೋತ್ಸವ ನಡೆಯಬೇಕಿತ್ತು. ಆದರೆ ಸತತ ನಾಲ್ಕು ಗಂಟೆ ಸುರಿದ ಮಳೆಯಿಂದಾಗಿ ರಥ ಸಾಗುವ ಮಾರ್ಗದುದ್ದಕ್ಕೂ ನೀರು ನಿಂತು ಕೆರೆಯಂತಾಗಿತ್ತು. ಇದರಿಂದಾಗಿ ಭಕ್ತರು ತೇರೆಳೆಯುವ ಕುರಿತು ಚರ್ಚೆಯಲ್ಲಿ ತೊಡಗಿರುವಾಗ ನಾಲವಾರ ಮತ್ತು ಕಾಖಂಡಕಿ ಸಂಸ್ಥಾನ ಮಠದ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ರಥ ಎಳೆಯಲು ಅಪ್ಪಣೆ ನೀಡಿದರು. ಬಳಿಕ ರಾತ್ರಿ ೧೦ಕ್ಕೆ ಭಕ್ತರು ಸದ್ಗುರುವಿಗೆ ಜೈಕಾರ ಹಾಕುತ್ತ ಕೆರೆಯಂತಾದ ಹೊಲದಲ್ಲೇ ತೇರು ಎಳೆದು ಕೃತಾರ್ಥರಾದರು.
ನಡೆಯಲಿಕ್ಕೂ ಆಗದಂಥ ಆವರಣದಲ್ಲಿ ತೇರು ಸರಾಗವಾಗಿ ಸಾಗಿರುವುದನ್ನು ಕಂಡ ಭಕ್ತರು ಇದು ಗುರುವಿನ ಪವಾಡ ಎಂದು ಕೈಮುಗಿದು ಭಕ್ತಿ ಸಮರ್ಪಿಸಿದರು. ಅಲ್ಲದೆ ಸದ್ಗುರುವಿನ ಈ ಪವಾಡದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸದ್ಭಕ್ತರ ಹರಕೆಯ ತನಾರತಿ ಉತ್ಸವ ಜರುಗಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಆರಾಧ್ಯ ಗುರುವಿಗೆ ತನಾರತಿ ಹೊತ್ತು ಹರಕೆ ಸಲ್ಲಿಸಿದರು.
ಶನಿವಾರ ನಸುಕಿನ ಜಾವ ಭಕ್ತರಾದ ಶಿವಲಿಂಗ ಭೀಮನಳ್ಳಿ ಬೆಂಗಳೂರು, ಗೋಪು ರಾಠೋಡ್ ಕಾಖಂಡಕಿ, ಡಾ.ಸುದೀಪ ಯಡ್ರಾಮಿ ಅವರಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಲಾಯಿತು. ನಂತರ ಒಂಬತ್ತು ದಿನ ಪುರಾಣ ನಡೆಸಿಕೊಟ್ಟ ಧುತ್ತರಗಾಂವದ ಸೂರ್ಯಕಾಂತ ಶಾಸ್ತ್ರೀ ಸಂಗೀತ ಮತ್ತು ತಬಲಾ ಸಾಥ್ ನೀಡಿದ ರಾಜಶೇಖರ ಹುಲ್ಲೂರ, ಮಹಾಂತೇಶ ಹುಲ್ಲೂರ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಅಶೋಕ ಸಾಹು ಗೋಗಿ, ಮಲ್ಲಿನಾಥ ಪಾಸೋಡಿ ಕಾಖಂಡಕಿ, ಶಿವರೆಡ್ಡಿಗೌಡ ಶಿರಾ, ಸಿದ್ದನಗೌಡ ಗುಳ್ಯಾಳ, ನಿಂಗ ಗುತ್ತೇದಾರ್, ಗುಂಡು ತಿಪ್ಪಣ್ಣ ರಾಠೋಡ್, ಮಲ್ಲಪ್ಪ ಪಾಸೋಡಿ, ಸಂಗಮೇಶ ಗದ್ದಗಿ, ಹಣಮಂತ ಕಟ್ಟಿಮನಿ ಇತರರಿದ್ದರು.