ಸಂವಿಧಾನದ ಆಶಯ ಅಡಕ: ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ ಹೇಳಿಕೆ

Kasapa
Published on

ಮಂಡ್ಯ: ಸಂವಿಧಾನದ ಮೂಲ ಆಶಯವೇ ಸದ್ಭಾವನೆಯಲ್ಲಿ ಅಡಕವಾಗಿದೆ ಎಂದು ಮಂಡ್ಯ ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ ಹೇಳಿದರು.
ನಗರದ ಹೊರವಲಯದ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ನಗರ ಘಟಕದಿಂದ ಗುರುವಾರ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸಂವಿಧಾನ ಮೂಲ ಆಶಯಗಳ ಪ್ರಕಾರ ನಾವೆಲ್ಲರೂ ಒಂದೇ. ಯಾವ ಜಾತಿ, ಧರ್ಮ, ಭೇದ-ಭಾವಗಳು ಇಲ್ಲ. ಸಂವಿಧಾನದ ಮೂಲ ಆಶಯವನ್ನು ಎತ್ತಿ ಇಡಿಯಬೇಕಾದ ಒಂದು ಸುದಿನವೇ ಸದ್ಭಾವನಾ ದಿನಾಚರಣೆ ಎಂದು ನುಡಿದರು.
ಇಂದು ನಾವು ಸದ್ಭಾವನಾ ದಿನಾಚರಣೆಯಾಗಿ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಅವರ ಜನ್ಮದಿನ ಅಂಗವಾಗಿ ಆಚರಿಸಲಾಗುತ್ತಿದೆ. ಇದರ ಬಗ್ಗೆ ಹೆಚ್ಚಾಗಿ ವಿದ್ಯಾವಂತರಿಗೆ ಹಿರಿಯರು ತಿಳಿಸಿಕೊಡಬೇಕಿದೆ. ನಮ್ಮ ಜೀವನದಲ್ಲಿ ಸದ್ಭಾವನೆಯು ಹಾಸು ಹೊಕ್ಕಿರಬೇಕು. ಸಂವಿಧಾನ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಬದುಕಬೇಕಿದೆ. ಕಾಲೇಜಿನ ಹಂತದಲ್ಲಿರುವ ನೀವು ಯಾವ ಗುರಿ ಇರಿಸಿಕೊಂಡು ಓದುತ್ತಿದ್ದೀರಿ. ಅದೆಷ್ಟೋ ವಿದ್ಯಾರ್ಥಿಗಳು ವೈದ್ಯ, ಇಂಜಿನಿಯರ್, ವಕೀಲರು, ಪ್ರಾಧ್ಯಾಪಕರು ಹಾಗೂ ರೈತರಾಗಿ ಸಾಧಿಸಬೇಕಿದೆ ಎಂದು ಕಿವಿಮಾತ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದೇಶಕ ಎಸ್.ಉಮೇಶ್ ಮಾತನಾಡಿ, ನಾವೆಲ್ಲರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಬಳಸಿಕೊಳ್ಳುವುದಕ್ಕಾಗಿ ಸದ್ಭಾವನೆ ದಿನಾಚರಣೆಗಳು ಮತ್ತು ರಾಷ್ಟೀಯ ಹಬ್ಬಗಳನ್ನು ಆಚರಿಸುತ್ತಾ ಜಾಗೃತಿ ಮೂಡಿಸುತ್ತೇವೆ. ಹಿಂದಿನ ಪೀಳಿಗೆಯವರು ಮಾಡಿರುವ ಸಾಧನೆಗಳನ್ನು ಮುಂದಿನ ಪೀಳಿಗೆ ಮಾಡುವುದು ಮತ್ತು ಅನುಸರಿಸುವುದು ಹಾಗೂ ಜಾಗೃತಿ ಮನೋಭಾವ ಹೆಚ್ಚಿಸಿಕೊಳ್ಳುವುದಕ್ಕಾಗಿ ಇಂತಹ ದಿನಾಚರಣೆಗಳು ಉಪಯುಕ್ತ ಎಂದು ತಿಳಿಸಿದರು.
ಎಸ್‌ಬಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net