

ಯಳಂದೂರು: ಪತ್ರಕರ್ತರಾಗಿ, ಸಮಾಜ ಸೇವಕರಾಗಿ, ಸಾಹಿತಿಗಳಾಗಿ ದಿ.ಸದಾಶಿವ ಗಟ್ಟವಾಡಿಪುರ ಜಿಲ್ಲೆ ಕಂಡ ಉತ್ತಮ ಸಮಾಜಮುಖಿ ಚಿಂತಕರಾಗಿದ್ದರು ಎಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಸಿ. ಮಾದೇಗೌಡ ಬಣ್ಣಿಸಿದರು.
ಸೋಮವಾರ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದಾಶಿವ ಗಟ್ಟವಾಡಿಪುರ ಜನ್ಮದಿನದ ನಿಮಿತ್ತ ಕುಟುಂಬದವರಿಂದ ಹಮ್ಮಿಕೊಂಡಿದ್ದ ಶಾಲೆಗಳಿಗೆ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಟ್ಟವಾಡಿಪುರ ಹೋರಾಟಗಾರರಾಗಿದ್ದರು. ಇವರು ಸೋಲಿಗರ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಇವರಿಗೆ ನ್ಯಾಯ ದೊರಕಿಸಿಕೊಡುವ ಅನೇಕ ಕೆಲಸಗಳನ್ನು ಮಾಡಿದ್ದರು. ನಮ್ಮ ಸಮುದಾಯದ ಮಕ್ಕಳು ಶಿಕ್ಷಿತರಾಗಬೇಕು ಎಂಬ ಸದಾಶಯದಿಂದ ಮಾರ್ಗದರ್ಶನ ನೀಡುತ್ತಿದ್ದರು. ಸಮುದಾಯದ ಅನೇಕ ಹೋರಾಟಗಳಲ್ಲಿ ನಮಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಉತ್ತಮ ವಾಗ್ಮಿಗಳಾಗಿದ್ದರು. ಹೊಗೆನಕಲ್ ಹೋರಾಟದಲ್ಲಿ ಭಾಗವಹಿಸಿದ್ದರು ಎಂದರು.
ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲೂ ಇವರು ಸಾಧನೆ ಮಾಡಿ ಹೊಸ ಅವತಾರಗಳು ಹಾಗೂ ಅರಳು ಮಲ್ಲಿಗೆ ಎಂಬ ಕೃತಿಗಳನ್ನು ರಚಿಸಿದ್ದರು. ಇಂದು ಜಿಲ್ಲೆಯಲ್ಲಿರುವ ಅನೇಕ ಹಿರಿಯ ಪತ್ರಕರ್ತರರಿಗೆ ಮಾರ್ಗದರ್ಶಕರಾಗಿದ್ದರು. ಸತತ 33 ವರ್ಷಗಳಿಂದ ಜಿಲ್ಲಾ ಪತ್ರಿಕೆಯನ್ನು ಹೊರತಂದು ಇವರು ಕಾಲಾವಾದ ನಂತರ ಇವರ ಮಗಳು ಹಾಗೂ ಅಳಿಯ ಇದನ್ನು ಮುಂದುವರೆಸುತ್ತಿರುವುದು ಸ್ತುತ್ಯರ್ಹವಾಗಿದೆ ಎಂದರು.
ಸವಿತಾ ಜಯಂತ್ ಮಾತನಾಡಿ, ನಮ್ಮ ತಂದೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಚಳವಳಿಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದರು. ಅನೇಕ ಅಧ್ಯಯನ ಪ್ರವಾಸಗಳನ್ನು ಮಾಡಿ ಇತರರಿಗೆ ಮಾರ್ಗದರ್ಶಕರಾಗಿದ್ದರು. ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಲಭಿಸಬೇಕು ಎಂಬ ನಿಲುವನ್ನು ಹೊಂದಿದ್ದು ಅದರಂತೆ ಕಾರ್ಯಸೂಚಿಗಳನ್ನು ರೂಪಿಸಿ ಕೆಲಸ ಮಾಡುತ್ತಿದ್ದರು. ಇವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ ಎಂದರು.
ಜಯಂತ್, ಶಾಲೆಯ ಶಿಕ್ಷಕ ಮರಪ್ಪ, ತುಳಸಿ, ಕಾಂತಮ್ಮ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಅಭೀಕ್ಷಾ, ದಾನವಿ, ಫೈರೋಜ್‌ಖಾನ್ ಡಿ.ಪಿ.ಮಹೇಶ್, ನವಾಜ್‌ಬೇಗ್ ಇತರರು ಇದ್ದರು.