

ಬೆಳಗಾವಿ: ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯವನ್ನು ಸರ್ಕಾರದ ಮೀಸಲಾತಿಯಿಂದ ವಂಚಿಸಬಾರದು. ತಪ್ಪು ಮಾಹಿತಿಯಿಂದ ಸಮುದಾಯಕ್ಕೆ
ಮೀಸಲಾತಿ ತಪ್ಪಿಸಲು ಹೊರಟಿರುವ ಸದಾಶಿವ ಆಯೋಗದ ವರದಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಬಂಜಾರ ಸಮುದಾಯದ ಮುಖಂಡರು, ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಬಂಜಾರ ಸಮುದಾಯದ ಮುಖಂಡ ಶಂಕರ ಚವ್ಹಾಣ ಮಾತನಾಡಿ ಬಂಜಾರ, ಭೋವಿ, ಕೊರಚ, ಕೊರವ ಸಮುದಾಯಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಎಲ್ಲ ದೃಷ್ಟಿಯಿಂದ ಹಿಂದುಳಿದಿವೆ. ಇದಕ್ಕಾಗಿಯೇ ಸಂವಿಧಾನದ ಮೂಲ ಆಶಯದಂತೆ ಮೀಸಲಾತಿ ನೀಡಲಾಗಿದೆ. ಆದರೆ, ಕೆಲ ಜನರು ದುರುದ್ದೇಶದಿಂದ ಸಮುದಾಯಕ್ಕೆ ಮೀಸಲಾತಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3,591 ತಾಂಡಾಗಳಿವೆ. ಪ್ರತಿ ತಾಂಡಾದ ಪ್ರತಿ ಕುಟುಂಬದ, ಪ್ರತಿ ವ್ಯಕ್ತಿಯಿಂದ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಮ್ಮ ನೋವು, ಸಂಕಟವನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ನಮಗಾಗಿರುವ ಅನ್ಯಾಯ ತಡೆಯಬೇಕು ಎಂದು ಆಗ್ರಹಿಸುತ್ತೇವೆ. ಪತ್ರ ಚಳವಳಿ ನಡೆಸುತ್ತೇವೆ ಎಂದರು.
ಹಿಂದುಳಿದವರ ಪಟ್ಟಿಯಲ್ಲಿರುವ ನಮ್ಮ ಸಮುದಾಯವನ್ನು ಮೀಸಲಾತಿಯಿಂದ ವಂಚಿಸ ಬಾರದು. ತಪ್ಪು ಮಾಹಿತಿಯಿಂದ ಸಮುದಾಯಕ್ಕೆ ಮೀಸಲಾತಿ ತಪ್ಪಿಸಲು ಹೊರಟಿರುವ ಸದಾಶಿವ ಆಯೋಗದ ವರದಿಯನ್ನು ಶೀಘ್ರ ಕೈ ಬಿಡಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆರ್.ಟಿ.ರಾಠೋಡ, ಪಾಂಡು ಜಲಗೇರಿ, ಲಕ್ಷ್ಮಣ ಲಮಾಣಿ, ಗೋಪಿ ಚವ್ಹಾಣ ಇತರರಿದ್ದರು.