ಸದಾಶಿವ ಆಯೋಗದ ವರದಿ ಅವೈಜ್ಞಾನಿಕ

CTD 25 BOVI SRI-02
Published on

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಚ, ಕೊರಮ (ಕೊಲಂಭೋ) ಸಮುದಾಯಗಳಿಗೆ ಮಾರಕವಾಗಿರುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಜ.10ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಗುರುಪೀಠದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ವರದಿ ಜಾರಿಯಾದರೆ 4 ಸಮುದಾಯಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಆದ್ದರಿಂದ ಇದನ್ನು ವಿರೋಧಿಸಿ ಬೆಂಗಳೂರಿನ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ವರದಿ ಗೊಂದಲದ ಗೂಡಾಗಿದೆ. ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. 4 ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಲ್ಲಿ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಜನರಿಗೆ ಮೀಸಲಾತಿ ಇಲ್ಲದಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ವರದಿಯ ಯಥಾವತ್ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಮತ್ತೊಂದು ತಂಡ ಜಾರಿ ಮಾಡದಂತೆ ಆಗ್ರಹಿಸುತ್ತಿದೆ. ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರಕ್ಕೆ ಶಿಫಾರಸು ಮಾಡುವ ಕ್ರಮ ಸರಿಯಲ್ಲ. ಸಾಧಕ-ಬಾಧಕಗಳನ್ನು ಬಹಿರಂಗವಾಗಿ ಚರ್ಚಿಸಿ, ಲೋಪಗಳಿದ್ದರೆ ಸರಿಪಡಿಸಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಅಣ್ಣ-ತಮ್ಮಂದಿರಂತೆ ಇರುವ ಪರಿಶಿಷ್ಟ ಜಾತಿ ಜನರ ನಡುವೆ ವರದಿ ವೈಮನಸ್ಸು ಮೂಡುವಂತೆ ಮಾಡುತ್ತದೆ. ಬೆಳಗಾವಿಯಲ್ಲಿ ಅಧಿವೇಶನದ ವೇಳೆ ವರದಿ ತಿರಸ್ಕರಿಸುವಂತೆ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಪ್ರಾಣ ಕೊಟ್ಟೇವು, ವರದಿ ಜಾರಿಗೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಲಿದ್ದೇವೆ. ಬೆಂಗಳೂರಿನ ಪ್ರತಿಭಟನಾ ಸಮಾವೇಶಕ್ಕೆ ಚಿತ್ರದುರ್ಗದಿಂದ ಒಂದು ಲಕ್ಷ ಜನ ಭಾಗವಹಿಸಲಿದ್ದಾರೆ ಎಂದರು.

ಭೋವಿ ಸಮಾಜದ ಮುಖಂಡ ರವಿ ಮಾಕಳಿ ಮಾತನಾಡಿ, ವರದಿ ವಿರುದ್ಧ ಶ್ರೀಗಳು ಹಲವು ಸಭೆಗಳ ಮೂಲಕ ಸಮಾಜದವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖಂಡ ಎಚ್.ಆನಂದಪ್ಪ ಮಾತನಾಡಿ, ನಮಗೆ ಸ್ಪಂದಿಸದ ರಾಜಕಾರಣಿಗಳಿಗೆ ಬಹಿಷ್ಕಾರ ಹಾಕಬೇಕೆಂದು ಅಭಿಪ್ರಾಯಪಟ್ಟರು. ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ರಾಘವೇಂದ್ರ, ಮಂಜುನಾಥ್, ಅನಂತ್‌ಕುಮಾರ್, ಲೋಕೇಶ್‌ನಾಯ್ಕ, ಇಂದ್ರಜಿತ್‌ನಾಯ್ಕ, ಅನಂತ್‌ನಾಯ್ಕ, ನಾಗೇಂದ್ರನಾಯ್ಕ, ಪ್ರಕಾಶ್, ರಾಮದಾಸ್ ನಾಯ್ಕ, ನಾಗರಾಜ್, ಮಾರುತಿ, ಹನುಮನಾಯ್ಕ, ಶಿವರುದ್ರಯ್ಯ, ರಾಮಚಂದ್ರಪ್ಪ ಇತರರಿದ್ದರು.

*ಕೋಟ್

ವರದಿ ಕೇಂದ್ರಕ್ಕೆ ಶಿಫಾರಸಾಗುವುದನ್ನು ತಡೆಯಬೇಕಿದೆ. ಇದೇನಾದರೂ ಅನುಷ್ಠಾನವಾದರೆ 4 ಸಮುದಾಯಗಳಿಗೆ ಕಂಟಕವಾಗಲಿದೆ. ರಾಜಕೀಯ ಪ್ರಭಾವ ಬೀರುವ ಮೂಲಕ ವರದಿ ಅನುಷ್ಠಾನಕ್ಕೆ ಮುಂದಾಗಿರುವುದನ್ನು ವಿರೋಧಿಸುತ್ತೇವೆ. ಈ ಕುರಿತು ದನಿಯೆತ್ತುವಂತೆ ಕೊಲಂಭೋ ಸಮುದಾಯದ ಶಾಸಕರಲ್ಲಿ ಮನವಿ ಮಾಡುತ್ತೇವೆ.

ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ

ಬಂಜಾರ ಗುರುಪೀಠ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net