ಅಭಿವೃದ್ಧಿ ವಂಚಿತ ಸಾದಲಿ ಗ್ರಾಮ

ಸಂಪೂರ್ಣವಾಗಿ ಹಾಳಾಗಿದ್ದರೂ ದುರಸ್ತಿ ಕಾಣದ ಸಾದಲಿ ಮತ್ತು ಎಸ್​. ದೇವಗಾನಹಳ್ಳಿ ಸಂಪರ್ಕ ರಸ್ತೆ.
Abhivruddhi Vanchita Saadali Grama
Published on

ರಸ್ತೆ, ಸಾರಿಗೆ ಸೇರಿ ಮೂಲ ಸೌಲಭ್ಯದಿಂದ ಗ್ರಾಮಸ್ಥರು ಬಲು ದೂರ

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ
ತಾಲೂಕಿನ ಸಾದಲಿ ಹಾಗೂ ಎಸ್​.ದೇವಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 10 ಕಿ.ಮೀ ನಷ್ಟು ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಿಡ್ಲಟ್ಟ ಕೇಂದ್ರ ಸ್ಥಾನದಿಂದ ಸುಮಾರು 32&33 ಕಿಮೀ ನಷ್ಟು ದೂರವಿರುವ ಹಾಗೂ ತಾಲೂಕಿನ ಗಡಿ ಭಾಗದಲ್ಲಿರುರುವ ಸಾದಲಿ ಗ್ರಾಮ ಕೇವಲ ರಸ್ತೆ, ಚರಂಡಿ ಇಲ್ಲದೇ ಪರದಾಡುತ್ತಿಲ್ಲ ಬದಲಿಗೆ ಯಾವುದೇ ಮೂಲ ಸೌಲಭ್ಯಗಳು ಸೇರಿದಂತೆ ಅಭಿವೃದ್ಧಿಯನ್ನೇ ಕಂಡಿಲ್ಲ.
ಸಾದಲಿ ಗ್ರಾಮ ಇಷ್ಟೆಲ್ಲಾ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳ ಜತೆ ಗ್ರಾಮಸ್ಥರ ಇಚ್ಛಾಶಕ್ತಿಯ ಕೊರತೆಯು ಕಾರಣ ಎನ್ನಬಹುದು.
ಶಿಡ್ಲಗಟ್ಟದಿಂದ ದೂರದಲ್ಲಿ ಇರುವ ಸಾದಲಿ ಗ್ರಾಮಕ್ಕೆ ಸರಿಯಾದ ಸೌಲಭ್ಯವಿಲ್ಲ. ಸಣ್ಣ ಪುಟ್ಟ ಸಾಮಾನು ಸರಂಜಾಮು ಬೇಕೆಂದರೆ ಹತ್ತಿರದ ಪೆರೇಸಂದ್ರ, ಚಿಕ್ಕಬಳ್ಳಾಪುರ ಕ್ಕೆ ಹೋಗಿಬರುವ ಇಲ್ಲಿನ ಜನ ಕೇವಲ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಕೆಲಸ ಕಾರ್ಯಗಳಿಗೆ ಮಾತ್ರ ಕೇಂದ್ರ ಸ್ಥಾನ ಶಿಡ್ಲಟ್ಟಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ಜನಕ್ಕೂ ಸಹ ಸಾದಲಿ ಶಿಡ್ಲಟ್ಟ ತಾಲೂಕಿಗೆ ಸೇರುತ್ತದೆ ಎನ್ನುವ ಭಾವನೆಯೇ ಇಲ್ಲ. ಇನ್ನು ಸಾದಲಿ ಗ್ರಾಮವನ್ನು ತಾಲೂಕನ್ನಾಗಿ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆಯಿದೆಯಾದರೂ ಈವರೆಗೂ ಸಾಧ್ಯವಾಗಿಲ್ಲ.

ದುರಸ್ತಿಯಾಗದ ರಸ್ತೆ
ಸಾದಲಿ ಗ್ರಾಮದ ಜನ ಶಿಡ್ಲಟ್ಟ ಕೇಂದ್ರ ಸ್ಥಾನಕ್ಕೆ ಬರುವುದಿರಲಿ ಕನಿಷ್ಠ ಅಕ್ಕ ಪಕ್ಕದ ಗ್ರಾಮಗಳಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗಲು ಸಹ ರಸ್ತೆ ಸರಿಯಿಲ್ಲ. ರಸ್ತೆ ಮಣ್ಣು ಹಾಗೂ ಜಲ್ಲಿ ಕಲ್ಲುಗಳಿಂದ ಕೂಡಿದ್ದು, ಆಳವಾದ ಗುಂಡಿಗಳು ಬಿದ್ದಿವೆ. ಶಾಲಾ ಮಕ್ಕಳು, ಸರ್ಕಾರಿ ನೌಕರರು, ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು ಸಂಕಷ್ಟ ಎದುರಿಸಬೇಕಾಗಿದೆ. ತಾಲೂಕಿನ ನಾಲ್ಕು ಹೋಬಳಿಗಳ ಪೈಕಿ ಸಾದಲಿ ಸಹ ಹೋಬಳಿ ಕೇಂದ್ರವಾಗಿದ್ದು, ಗ್ರಾಪಂ ಕೇಂದ್ರ ಸ್ಥಾನವಾಗಿದೆ. ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಾಕಪ್ಪನಹಳ್ಳಿ, ಗಡಿಮಿಂಚೇನಹಳ್ಳಿ ಗ್ರಾಮಸ್ಥರು ಸಾದಲಿಗೆ ಬರಬೇಕಾದರೆ ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸಬೇಕಿದೆ. ಸರ್ಕಾರಿ ಬಸ್​ ಸೌಲಭ್ಯ ಇಲ್ಲದಿರುವುದರಿಂದ ದ್ವಿಚಕ್ರ ವಾಹನ ಅಥವಾ ಖಾಸಗಿ ವಾಹನಗಳೇ ಗತಿ ಎಂಬಂತಾಗಿದೆ.

ಜನತೆಗೆ ಮುಟ್ಟಿಲ್ಲ ಸರ್ಕಾರಿ ಯೋಜನೆ
ಕುಡಿಯುವ ನೀರಿಗೇನು ಕೊರತೆಯಿಲ್ಲ, ಸರಕಾರಿ ಕಿರಿಯ ಶಾಲೆ, ಅಂಗನವಾಡಿ ಇದೆ. ಬೀದಿ ದೀಪ ಪರವಾಗಿಲ್ಲ, ಚರಂಡಿ ವ್ಯವಸ್ಥೆ ಇದೆಯಾದರೂ ರಸ್ತೆ ಪಕ್ಕದಲ್ಲಿ ಕಸದ ರಾಶಿಗೇನೂ ಕಡಿಮೆಯಿಲ್ಲ. ಗುಡಿಸಲು ಮನೆಗಳು ಇನ್ನೂ ಕಾಣುತ್ತಿವೆ. ಬಹುತೇಕ ಸರ್ಕಾರಿ ಯೋಜನೆಗಳು ಈ ಗ್ರಾಪಂ ವ್ಯಾಪ್ತಿಯ ಜನತೆಗೆ ಮುಟ್ಟಿಲ್ಲ. ಆದರೆ ಇವ್ಯಾವುದನ್ನು ಆ ಗ್ರಾಮದ ಜನ ಕೇಳುತ್ತಿಲ್ಲ. ಅವರ ಬೇಡಿಕೆಯೇನಿದ್ದರೂ ಉತ್ತಮ ರಸ್ತೆ, ಬಸ್​ ಸೌಕರ್ಯ ಅಷ್ಟೆ.

ಬೆಂಗಳೂರು&ಹೈದರಾಬಾದ್​ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು ಐದಾರು ವರ್ಷಗಳಿಂದ ಹೀಗೆ ಗುಂಡಿಗಳಿಂದ ಕೂಡಿದೆ. ಇದೇ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿದಂತೆ ಹಲವರು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ಆದರೆ ಯಾವೊಬ್ಬರೂ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲೇ ಇಲ್ಲ. ಕೂಡಲೇ ರಸ್ತೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡೆಸುತ್ತೇವೆ.

ನಾರಾಯಣಸ್ವಾಮಿ, ಗ್ರಾಮಸ್ಥ, ಸಾದಲಿ

ಸಾದಲಿ ಮತ್ತು ಪೆರೇಸಂದ್ರ ಮಾರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಬಹುತೇಕ ನಾಗರಿಕರು ಈಗಾಗಲೇ ರಸ್ತೆ ಗುಂಡಿಗಳಿಂದ ಬಿದ್ದು ಗಾಯ ಗೊಂಡಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಸಂಬಂದಪಟ್ಟ ಅಧಿಕಾರಿಗಳು ರಸ್ತೆ ಕಾಮಗಾರಿ ದುರಸ್ತಿಗೊಳಿಸಿ ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು.

ನಿಲವರಾತಹಳ್ಳಿ ವೆಂಕಟೇಶ್​, ದಲಿತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net