ಕಂಚೀಪುರದಲ್ಲಿ ಮನೆ ಮಾಡಿದೆ ಸಡಗರ

HSD UTARE MALE 23 (1)
Published on

ಎಂ.ಯೋಗೀಶ್ ಹೊಸದುರ್ಗ: ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಂಚೀವರದರಾಜ ಸ್ವಾಮಿಯ ಐತಿಹಾಸಿಕ ಉತ್ತರೆ ಮಳೆಯ ಅಂಬಿನೋತ್ಸವ ಸೆ.25, 26ರಂದು ವಿಜೃಂಭಣೆಯಿಂದ ನೆರವೆರಲಿದೆ. ಕಾಂಚಾಣದ ಜಾತ್ರೆಯಾಗಿರುವ ಅಂಭಿನೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.

ಅಂಬಿನೋತ್ಸವದ ಧಾರ್ಮಿಕ ವಿಧಿವಿಧಾನಗಳು ಗುರುವಾರ ಅರಂಭವಾಗಿದ್ದು, ರಾತ್ರಿ ಮೀನ ಲಗ್ನದಲ್ಲಿ ಕಂಚೀವರದರಾಜ ಸ್ವಾಮಿ ದೇವಾಲಯದಲ್ಲಿ ಪಟ್ಟಕ್ಕೆ ಕೂರುವ ಮೂಲಕ ಉತ್ತರೆಮಳೆ ಅಂಬಿನೋತ್ಸವಕ್ಕೆ ಚಾಲನೆ ದೊರೆತಿದೆ.

ಪಟ್ಟದ ಕತ್ತಿಯನ್ನು ಹಿಡಿದು ಆಶ್ವಾರೂಢನಾಗಿ ಪಟ್ಟಕ್ಕೆ ಕುಳಿತ ದೇವರಿಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

ಅಂಬಿನೋತ್ಸವದ ಪೂರ್ವಭಾವಿಯಾಗಿ ಸೆ.24ರ ಭಾನುವಾರ ರಾತ್ರಿ ದೇಗುಲದಲ್ಲಿ ಬುತ್ತಿಬಾನ ಸೇವೆ ನೆರವೇರಲಿದೆ. ಸೋಮವಾರ ಪೂಜಾಕಾರ್ಯಗಳು ನೆರವೇರಿದ ಬಳಿಕ ಕಂಚೀವರದರಾಜ ಸ್ವಾಮಿ ಮಧ್ಯಾಹ್ನ ಬುತ್ತಿಬಾನದೊಂದಿಗೆ ದೇವಾಲಯದಿಂದ ಹೊರಬರಲಿದೆ. ನಂತರ ಮೆರವಣಿಗೆಯೊಂದಿಗೆ ಉತ್ತರೆ ಬೆಟ್ಟಕ್ಕೆ ತೆರಳಿ ಸಿದ್ದೇಶ್ವರ ಸ್ವಾಮಿಗೆ ಬುತ್ತಿಬಾನ ಸರ್ಮಪಿಸಿ ಬಿಲ್ಲು ಮತ್ತು ಬಾಣದಿಂದ ಅಂಬು ಹೊಡೆದು ಉತ್ಸವ ಆಚರಿಸಲಾಗುತ್ತದೆ.

ಮಂಗಳವಾರ ಉತ್ತರೆ ಬೆಟ್ಟದಿಂದ ಹಿಂತಿರುಗುವ ಕಂಚೀವರದರಾಜ ಸ್ವಾಮಿಗೆ ದಶರಥ ರಾಮೇಶ್ವರ ವಜ್ರದಲ್ಲಿ ಉತ್ತರೆ ಮಳೆಯ ನೀರಿನಿಂದ ತುಂಬಿರುವ ದೇವರ ಹೊಂಡದಲ್ಲಿ ಅಭಿಷೇಕ ನಡೆಸಿ ನಾಮಧಾರಣೆ ಮಾಡಲಾಗುತ್ತದೆ. ಮೆರವಣಿಗೆ, ಮುಳ್ಳು ಪಾದುಕೆ ಪವಾಡ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಐತಿಹಾಸಿಕ ಹಿನ್ನೆಲೆ: ಉತ್ತರೆ ಬೆಟ್ಟದಲ್ಲಿ ಶೈವ ಸಂಸ್ಕೃತಿಯ ಕಾಳಮುಖ ಪಂಥಕ್ಕೆ ಸೇರಿದ ಸಿದ್ಧರು ಅನ್ನ ಅಹಾರಾದಿಗಳನ್ನು ತ್ಯಜಿಸಿ ಶಿವಧ್ಯಾನದಲ್ಲಿ ನಿರತರಾಗಿ ನಿತ್ರಾಣಗೊಂಡಿರುತ್ತಾರೆ. ಅಹಾರವಿಲ್ಲದೆ ನಿತ್ರಾಣರಾಗಿದ್ದ ಸಿದ್ಧರಿಗೆ ವರದಯ್ಯ (ಕಂಚೀವರದರಾಜ ಸ್ವಾಮಿ) ಮೊಸರನ್ನದ ಬುತ್ತಿಯನ್ನು ನೀಡಿ ಸತ್ಕರಿಸುವ ಮೂಲಕ ಅವರ ಕೃಪೆಗೆ ಒಳಗಾಗಿ ದೈವತ್ವವನ್ನು ಹೊಂದುತ್ತಾನೆ. ಉತ್ತರೆ ಮಳೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದ ಕಾರಣದಿಂದ ಉತ್ತರೆ ಮಳೆಯ ಕಾಲದಲ್ಲಿಯೇ ಅಂಬಿನೋತ್ಸವ ನಡೆಯುತ್ತದೆ.

ನಾಮಧಾರಣೆ: ಉತ್ತರೆ ಮಳೆಯ ಅಂಬಿನೋತ್ಸವದಲ್ಲಿ ಕಂಚೀವರದರಾಜ ಸ್ವಾಮಿಯ ಮೂರ್ತಿಗೆ ನಾಮಧಾರಣೆ ಮಾಡುವ ಪದ್ಧತಿ ಇದೆ.

ಬುತ್ತಿಬಾನ: ಮೊಸರು, ಈರುಳ್ಳಿ, ಬೆಳ್ಳುಳ್ಳಿ, ಹೆಸರುಬೆಳೆ, ಕಡಲೆಬೆಳೆ ಹಾಗೂ 18 ಸೇರು ಅಕ್ಕಿ ಮತ್ತಿತರ ವಸ್ತುಗಳಿಂದ ಮೊಸರು ಅನ್ನದ ಬುತ್ತಿಯನ್ನು ಮಡಿಯಿಂದ ತಯಾರಿಸಲಾಗುತ್ತದೆ. ಬುತ್ತಿ ಬಾನವನ್ನು ಕಂಚೀವರದರಾಜ ಸ್ವಾಮಿಯ ನೇತೃತ್ವದಲ್ಲಿ ಉತ್ತರೆ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಅಲ್ಲಿರುವ ಸಿದ್ದೇಶ್ವರ ಸ್ವಾಮಿಗೆ ಅರ್ಪಿಸಿದ ನಂತರ ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ.

ಝಣಝಣ ಕಾಂಚಾಣ: ಕಂಚೀವರದರಾಜ ದೇವಾಲಯದಲ್ಲಿ ಭಕ್ತರು ಕಾಣಿಕೆ ಅರ್ಪಿಸುವ ವಿಧಾನ ಬಹಳ ವಿಶೇಷ. ದೇವರ ಮೇಲೆ ನಾಣ್ಯಗಳನ್ನು ತೂರುವ ಮೂಲಕ ಹರಕೆ ಸಲ್ಲಿಸುವ ಸಂಪ್ರದಾಯವಿದೆ. ಅಂಬಿನೋತ್ಸವಕ್ಕಾಗಿ ದೇವಾಲಯದಿಂದ ಹೊರ ಬರುವ ದೇವರು ದೇವಾಲಯಕ್ಕೆ ಹಿಂತಿರುಗುವ ತನಕ ಭಕ್ತರು ಲಕ್ಷಾಂತರ ರೂ. ಮೌಲ್ಯದ ನಾಣ್ಯಗಳನ್ನು ದೇವರ ಮೇಲೆ ತೂರುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ. ಜಾತ್ರೆ ಮುಗಿಯುವ ತನಕ ನಾಣ್ಯಗಳ ಸದ್ದು ನಿರಂತರವಾಗಿ ಕೇಳಿಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net