ದೈವತ್ವಕ್ಕೇರಲು ತ್ಯಾಗ ಬಹಳ ಮುಖ್ಯ

1
Published on

ಮೈಸೂರು: ಮನುಷ್ಯತ್ವದಿಂದ ದೈವತ್ವಕ್ಕೇರಲು ತ್ಯಾಗ ಬಹಳ ಮುಖ್ಯ ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜ್ಞಾನಯೋಗಾನಂದಜೀ ಮಹಾರಾಜ್ ಹೇಳಿದರು.

ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್‌ನ 9ನೇ ವಾರ್ಷಿಕ ಸಮ್ಮೇಳನದಲ್ಲಿ ‘ಶ್ರೀ ರಾಮಕೃಷ್ಣ ವಚನವೇದದ ಸಾರಸೂಚಿ’ ಕುರಿತು ಉಪನ್ಯಾಸ ನೀಡಿದರು.

‘ಕಾಮ ಕಾಂಚನ ತ್ಯಾಗವೇ ನಿಜವಾದ ತ್ಯಾಗ’ ಎಂದು ಶ್ರೀ ರಾಮಕೃಷ್ಣರು ಅನೇಕ ಬಾರಿ ಹೇಳಿದ್ದಾರೆ. ಕೆಲವೊಂದು ಕಡೆ ಪುನರಾವರ್ತನೆ ಎಂದರೆ ದೋಷ. ಆದರೆ, ಆಧ್ಯಾತ್ಮಿಕ ವಿಚಾರಗಳಲ್ಲಿ ಪುನರಾವರ್ತನೆ ಎಂದರೆ ಒಂದು ರೀತಿಯ ಗುಣ. ಮನಸ್ಸಿಗೆ ಮುಖ್ಯವಾದ ವಿಚಾರವನ್ನು ತಿಳಿಸಲು ತ್ಯಾಗ ಪ್ರೇರಕ ವಿಚಾರವನ್ನು ಪದೇ ಪದೆ ಹೇಳಲಾಗಿದೆ ಎಂದರು.

ಪ್ರಪಂಚದಲ್ಲಿ ಅನೇಕ ಸಂಗತಿಗಳಿವೆ. ಆದರೆ, ಅವುಗಳು ಮನುಷ್ಯನನ್ನು ಬಲವಾಗಿ ಬಂಧಿಸುವುದಿಲ್ಲ. ‘ನಾನು- ನನ್ನದು ಎನ್ನುವುದನ್ನು ಅನುಸರಿಸಿಕೊಂಡು ಇಡೀ ಪ್ರಪಂಚವೇ ನಡೆಯುತ್ತದೆ. ಆದ್ದರಿಂದ ‘ನಾನು- ನನ್ನದು ಎನ್ನುವುದು ಮನುಷ್ಯನನ್ನು ಬಂಧಿಸುವ ವಸ್ತು’ ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ. ಅದನ್ನು ಶ್ರೀರಾಮಕೃಷ್ಣರು ಮತ್ತೊಂದು ರೀತಿ ‘ಕಾಮ- ಕಾಂಚನ’ ಎಂದು ಹೇಳಿದ್ದಾರೆ. ಪ್ರಪಂಚದಲ್ಲಿನ ಎಲ್ಲ ವಸ್ತುಗಳನ್ನೂ ತನ್ನದಾಗಿ ಮಾಡಿಕೊಳ್ಳಲು ಇರುವ ಸಾಮಗ್ರಿಯೇ ಕಾಂಚನ (ಹಣ). ಹಾಗಾಗಿ, ‘ಕಾಮ- ಕಾಂಚನ’ ಎರಡನ್ನೂ ತ್ಯಜಿಸಿದರೆ ನಿಜವಾದ ತ್ಯಾಗ ಮಾಡಿದಂತಾಗುತ್ತದೆ ಎಂದರು.

ಅನೇಕ ದ್ವಂದ್ವ, ವಿರುದ್ಧ ಭಾವ, ದೃಷ್ಟಿಕೋನಗಳು ನಮ್ಮಲ್ಲಿ ಇವೆ. ಅವುಗಳನ್ನು ಸಮನ್ವಯಗೊಳಿಸಿ, ಏಕದೃಷ್ಟಿಯಿಂದ ನೋಡಬೇಕು. ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ ಎಂದು ರಾಮಕೃಷ್ಣರು ಪ್ರತಿಪಾದಿಸಿದ್ದಾರೆ. ಒಂದೊಂದು ಯುಗಕ್ಕೆ ಒಂದೊಂದು ಮಾರ್ಗ ವಿಶೇಷ. ಕಲಿಯುಗದಲ್ಲಿ ನಮ್ಮ ದೃಷ್ಟಿ ದೇಹದ ಕಡೆಗೆ ಇರುತ್ತದೆ. ಭಕ್ತಿಮಾರ್ಗ ಸುಲಭ ಹಾಗೂ ಸರಳ. ಅದನ್ನು ಅನುಸರಿಸಿ. ಧರ್ಮಗಳ ನಡುವೆ ಕಲಹ ಬೇಡ. ಧರ್ಮಗಳು ಪರಸ್ಪರ ಗೌರವದಿಂದ ಇರಬೇಕು. ಒಳ್ಳೆಯ ಅಂಶ ಎಲ್ಲಿದ್ದರೂ ಸ್ಪೀಕರಿಸಬೇಕು. ಇತರರನ್ನು ಗೌರವಿಸಬೇಕು ಎಂಬುದೇ ರಾಮಕೃಷ್ಣರ ಉಪದೇಶ ಸಾರ ಎಂದು ತಿಳಿಸಿದರು.
ಮಿತಿಗೆ ಒಳಪಡಿಸಬೇಡಿ: ಭಗವಂತನನ್ನು ಯಾವುದೇ ಮಿತಿಗೆ ಒಳಪಡಿಸಬೇಡಿ. ಆತ ಎಲ್ಲ ಕಡೆ ಇದ್ದಾನೆ. ನಮ್ಮ ಹೃದಯವೇ ಆತನ ಮೂಲನೆಲೆ ಎಂದು ಭಾವಿಸಿ ಬದುಕಿ ಎಂದರು.

‘ಶ್ರೀ ರಾಮಕೃಷ್ಣ ವಚನವೇದ’ ಇಡೀ ಜಗತ್ತಿಗೆ ಭಗವಂತನ ಸಂದೇಶವನ್ನು ಪಸರಿಸುವ ದಿವ್ಯಗ್ರಂಥ. ಕನ್ನಡದಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ಮಹೇಂದ್ರನಾಥಗುಪ್ತರು ಸಂಗ್ರಹಿಸಿ, ಬರೆದು ಪ್ರಕಟಿಸಿದ ಕೃತಿ. ಶ್ರೀ ರಾಮಕೃಷ್ಣರು ತಮ್ಮ ಜೀವನದ ಕೊನೆಯ ಕೆಲವು ವರ್ಷ ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಯುವ ಭಕ್ತರೊಂದಿಗೆ ನಡೆಸಿದ ಮಾತುಕತೆಗಳ ದಾಖಲೆ ಇದು ಎಂದರು.

ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ‘ಶ್ರೀ ರಾಮಕೃಷ್ಣರ ದೈವತ್ವ-ನೇರ ಶಿಷ್ಯರು ಕಂಡಂತೆ’ ಕುರಿತು, ಪಾವಗಡ ತಾಲೂಕಿನ ವೆಂಕಟಾಪುರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜೀ ಅವರು ‘ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಕಂಡ ಭಾರತ’ ವಿಷಯ ಕುರಿತು ಉಪನ್ಯಾಸ ನೀಡಿದರು.
ವಿವಿಧ ಮಠಾಧೀಶರು, ಮಾತಾಜಿಯವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net