

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಾವುದೇ ಸಂಸ್ಥೆಗಳನ್ನು ಸ್ಥಾಪಿಸಿ, ಬೆಳೆಸಿ ಉಚ್ಛ್ರಾಯ ಸ್ಥಿತಿಗೆ ತರುವಲ್ಲಿ ಅನೇಕ ಜನರ, ವರ್ಷಗಳ ಪರಿಶ್ರಮ ಮತ್ತು ತ್ಯಾಗವಿರುತ್ತದೆ. ಪ್ರಸಕ್ತ ಈ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಿರುವವರಿಗೆ ಹಿಂದಿನವರ ಪ್ರಯತ್ನ ಮತ್ತು ತ್ಯಾಗದ ಅರಿವು ಇರಬೇಕು. ಇದಕ್ಕಾಗಿ ಕಾಲಕಾಲಕ್ಕೆ ಸಂಸ್ಥೆಯಲ್ಲಿ ನಡೆಯುವ ಬೆಳವಣಿಗೆಗಳ ದಾಖಲೀಕರಣ ಆಗುತ್ತಿರಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಪೆವಿಲಿಯನ್‌ದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಕೃಷ್ಣ ತಾವರಗೇರಿ ಬರೆದ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಸ್ಥೆ ಇತಿಹಾಸ ಮತ್ತು ಪರಂಪರೆಯ ಮಾಹಿತಿಯನ್ನು ಮುಂದಿನ ಪೀಳಿಗೆಗೆ ಒದಗಿಸುವಲ್ಲಿ ಇಂತಹ ಪುಸ್ತಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಡಾ. ಕೃಷ್ಣ ತಾವರಗೇರಿ ಅವರು 1979-80ರಲ್ಲಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಕಾರ್ಯದರ್ಶಿಯಾಗಿದ್ದಾಗ ಸಂಸ್ಥೆ ಕಂಡ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಪುಸ್ತಿಕೆಯಲ್ಲಿ ದಾಖಲಿಸಿದ್ದಾರೆ ಎಂದರು.
ಹಿರಿಯ ಟೆನಿಸ್ ತರಬೇತುದಾರ ಪ್ರಭಾಕರ ಕುಲಕರ್ಣಿ ಮಾತನಾಡಿ, ಜಿಲ್ಲಾ ಟೆನಿಸ್ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಿರುವುದು ಶ್ಲಾಘನೀಯ. ಶ್ಲಾಘಿಸಿ ಕಿರಿಯರಿಗೆ ಅದರಲ್ಲೂ ಬಾಲಕಿಯರಿಗೆ ಟೆನಿಸ್ ತರಬೇತಿ ನೀಡುವಲ್ಲಿ ಸಂಸ್ಥೆ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮದನಮೋಹನ ತಾವರಗೇರಿ ಮಾತನಾಡಿ, 7 ದಶಕಗಳಿಂದ ಸಂಸ್ಥೆಯೊಂದಿಗೆ ಹೊಂದಿರುವ ನಿಕಟ ಸಂಬಂಧ ಸ್ಮರಿಸಿಕೊಂಡು ತಮ್ಮ ಜತೆಗೆ ಆಡಿದ ಆಟಗಾರರನ್ನು ನೆನಪಿಸಿಕೊಂಡರು. ಈಗಿನ ಪದಾಧಿಕಾರಿಗಳ ಪರಿಶ್ರಮದಿಂದ ಸಂಸ್ಥೆ ಅಭಿವೃದ್ಧಿ ಹೊಂದಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಡಾ. ಕೃಷ್ಣ ತಾವರಗೇರಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಅರಣ್ಯಾಧಿಕಾರಿ ಯತೀಶ, ಡಿಡಿಎಲ್‌ಟಿಎ ಕಾರ್ಯದರ್ಶಿ ಸಂದೀಪ ಬಣವಿ, ಡಾ. ಶರಯು, ಡಾ. ಗೌರಿ, ಹಿರಿಯರು ಪಾಲ್ಗೊಂಡಿದ್ದರು.
ಗುರುರಾಜ ಜಮಖಂಡಿ ಸ್ವಾಗತಿಸಿದರು. ವೀರೇಶ ಕೆಲಗೇರಿ ವಂದಿಸಿದರು.