ತ್ಯಾಗ, ಸಮರ್ಪಣಾ ಪರಂಪರೆ ಮೈಗೂಡಿಸಿಕೊಂಡು ಬಂದ ಹವ್ಯಕರು

Raghaveshwara Shree Blessings
Published on

ಗೋಕರ್ಣ: ಹವ್ಯಕ ಸಮುದಾಯ ತ್ಯಾಗ, ದಾನ ಮತ್ತು ಸಮರ್ಪಣಾ ಭಾವವನ್ನು ಮೈಗೂಡಿಸಿಕೊಂಡು ಬಂದಿರುವ ವಿಶಿಷ್ಟ ಪರಂಪರೆಗೆ ಸೇರಿದೆ. ಇಂತಹ ಸಮಾಜ ದೇಶ ಮತ್ತು ಧರ್ಮ ಹಿತಕ್ಕಾಗಿ ನಿಸ್ವಾರ್ಥಮಯ ಸಂಘಟನೆಯನ್ನು ಕಟ್ಟಿ ಬೆಳೆಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು ಎಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ವಸ್ಯ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಸೋಮವಾರ ನಡೆದ ಮುಳ್ಳೇರಿಯಾ ಮಂಡಲದ ಕಾಸರಗೋಡು, ಗುಂಪೆ, ಕುಂಬಳೆ ಮತ್ತು ನೀರ್ಚಾಲು ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆಯಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಸನಾತನ ಸಂಸ್ಕಾರ-ಸಂಸ್ಕೃತಿಗೆ ಬದ್ಧರಾಗಿರುವ ಹವ್ಯಕರಾದ ನಾವು, ಸಮಾಜದ ಹಿತಕ್ಕಾಗಿ ತ್ಯಾಗಕ್ಕೂ ಸಿದ್ಧರಾಗುವ ಜತೆಗೆ ಸಮಸ್ತ ಸಮಾಜದಲ್ಲಿ ಇಂತಹ ಮನೋಭಾವ ವೃದ್ಧಿಸಲು ಪ್ರೇರಣೆಯಾಗಬೇಕು. ಈ ಮೂಲಕ ಜೇನುಗೂಡಿನಂಥ ಸಂಘಟನೆಯನ್ನು ಕಟ್ಟಿ ದೇಶಕ್ಕೆ ಮಾದರಿಯಾಗಬೇಕು. ಈ ಬಗೆಯ ವಿಶ್ವದ ಒಳಿತಿನ ಉದ್ದೇಶದಿಂದ ಸ್ಥಾಪಿತವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ರಾಜ್ಯಾದ್ಯಂತ ಸ್ವರ್ಣಪಾದುಕೆಯ ಪರ್ಯಟನದಿಂದ ಈ ಮಹಾಸಂಕಲ್ಪಕ್ಕೆ ಬೃಹತ್ ಶಕ್ತಿಯನ್ನು ತುಂಬಲಿದೆ. ಇವುಗಳ ಪ್ರಸಾರ ಮತ್ತು ಪ್ರವರ್ಧನೆಯ ದೇಶ ಹಾಗೂ ಧರ್ಮ ಹಿತ ಮಹಾಕಾರ್ಯಕ್ಕೆ ಸಕಲರೂ ಸನ್ನದ್ಧರಾಗಬೇಕು ಎಂದು ಶ್ರೀಗಳು ಕರೆಯಿತ್ತು ಆಶೀರ್ವಚನವಿತ್ತರು.

ಮುಳ್ಳೇರಿಯಾ ಮಂಡಲದ 4 ವಲಯಗಳಲ್ಲಿ ಅಮೋಘ ಕೊಡುಗೆಯಿತ್ತ ಶ್ರೀಕೃಷ್ಣ ಭಟ್ಟ ವಾಶೆಮನೆ, ಜಯದೇವ ಖಂಡಿಗೆ, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಡಾ. ಶ್ಯಾಮಪ್ರಸಾದ ಕಬೆಕ್ಕೋಡು, ವೈ.ಚಂದ್ರಶೇಖರ ಭಟ್ಟ, ರಾಮಭಟ್ಟ ಅಮ್ಮಂಕಲ್ಲು, ಭುವನೇಶ್ವರಿ ಬಾಳಿಕೆ ಮತ್ತು ಗೋಪಾಲಕೃಷ್ಣ ಭಟ್ಟ ಶಿರಂತಡ್ಕ ಅಬರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಂಡಾರಿ ಸಮಾಜದ ವತಿಯಿಂದ ಶ್ರೀಗುರುಪಾದುಕಾ ಪೂಜೆ ನಡೆಯಿತು. ಸಮಾಜಕ್ಕೆ ಗಣನೀಯ ಸೇವೆಯನ್ನಿತ್ತ ಗಜಾನನ ಭಂಡಾರಿ ಇಡಗುಂಜಿ, ಸುಬ್ರಾಯ ಮಂಜುನಾಥ ಭಂಡಾರಿ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ನಾರಾಯಣ ಭಂಡಾರಿ ಮುನವಳ್ಳಿ, ರಾಮಚಂದ್ರ ಹನುಮಂತ ಭಂಡಾರಿ ಹೊನ್ನಾವರ ಹಾಗೂ ರಾಮ ವೆಂಕಪ್ಪ ಭಂಡಾರಿ ದೀವಗಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಉಪಾಧ್ಯಕ್ಷ ನಾರಾಯಣಮೂರ್ತಿ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ,ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net