

ಮಂಡ್ಯ: ರಾಜ್ಯದಲ್ಲಿ ಭಂಡಗೆಟ್ಟ ಮತ್ತು ತುಗಲಕ್ ಸರ್ಕಾರವಿದೆ. ಆರ್‌ಡಿಪಿಆರ್ ನೌಕರರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದರೂ ಸಹ ಇಲಾಖಾ ಸಚಿವರು ಈವರೆಗೆ ನೌಕರರನ್ನು ಭೇಟಿಯಾಗುವ ಸೌರ್ಜನ್ಯ ತೋರದೆ ಭಂಡತನ ಪ್ರದಶಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಕಷ್ಟಕ್ಕೆ ಸ್ಪಂದಿಸುವಂತಹ ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಯನ್ನು ರಾಜ್ಯಸರ್ಕಾರ ಕೇಳದಿರುವುದು ಬೇಸರದ ವಿಷಯ. ಆದ್ದರಿಂದ ನೌಕರರ ಪರವಾಗಿ ಬಿಜೆಪಿ ಕೂಡ ಬೀದಿಗಿಳಿದಿದೆ. ಅದರಂತೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯೇಂದ್ರ ಅವರು ಬೆಂಗಳೂರಿನಲ್ಲಿ ಗ್ರಾಪಂ ನೌಕರರು ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದಾರೆ. ಜತೆಗೆ ನೌಕರರ ಪರವಾಗಿ ಸದನದಲ್ಲಿ ದನಿ ಎತ್ತುವಂತೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಒತ್ತಾಯಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದು ಎಷ್ಟೋ ವರ್ಷವಾಗಿದೆ. ಪರಿಣಾಮ ಸ್ಥಳೀಯ ಆಡಳಿತ ಸತ್ತು ಹೋಗಿದೆ. ಹೀಗಿರುವಾಗ ಗ್ರಾಮಮಟ್ಟದಲ್ಲಿ ಜನರ ಕಷ್ಟವನ್ನು ಆಲಿಸುವುದರ ಜತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿರುವ ಗ್ರಾಪಂ ನೌಕರರಿಗೆ ಸೌಲಭ್ಯ ಒದಗಿಸಿಕೊಡುವುದು ರಾಜ್ಯಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
ಜೇಷ್ಠತೆ ಆಧಾರದ ಮೇಲೆ ಗ್ರಾ.ಪಂ. ಅಧಿಕಾರಿಗಳು ಮತ್ತು ನೌಕರರಿಗೆ ಬಡ್ತಿ ನೀಡಬೇಕು. ಸೇವೆ ಕಾಯಂ ಮಾಡಬೇಕು. ನೀರುಗಂಟಿಗಳು ಮತ್ತು ಪೌರಕಾರ್ಮಿಕರಿಗೆ ವೈಜ್ಞಾನಿಕ ವೇತನ ನೀಡಬೇಕು. ಮಹಿಳಾ ನೌಕರರಿಗೆ ಒಂದು ವರ್ಷದವರೆಗೆ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು. ಹಿರಿಯ ಅಧಿಕಾರಿಗಳು ಕಿರುಕುಳ ಕೊಡಬಾರದು. ಒಟ್ಟಾರೆ ನೌಕರರ ಸಮಸ್ಯೆಗಳಿಗೆ ಸರ್ಕಾರ ಕಿವಿಯಾಗಬೇಕೆಂದು ಆಗ್ರಹಿಸಿದರು.