

ನೆಲ್ಯಾಡಿ: ಕರಾವಳಿಗರ ಹೆಮ್ಮೆಯ ಕಲೆ ಯಕ್ಷಗಾನ. ಇಂತಹ ಕಲೆಯನ್ನು ಬೆಳೆಸುವುದೇ ದೊಡ್ಡ ಸಾಧನೆ. ಯಕ್ಷಗಾನ ಆಟವೂ ಹೌದು. ಪಾಠವೂ ಹೌದು ಎಂದು ಕಟೀಲು ದೇವಸ್ಥಾನದ ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.
ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ಶಬರೀಶ ಯಕ್ಷಗಾನ ಕಲಾಕೇಂದ್ರದ 7ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಮಾತನಾಡಿ, ಕಲೆಯನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿಯುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಲಾಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಕಡಬ ಉಪ ತಹಸೀಲ್ದಾರ್ ಗೋಪಾಲ ಕೆ, ಉದ್ಯಮಿ ದಿನೇಶ್ ಆಚಾರ್ಯ, ಕಡಬ ಶ್ರೀದೇವಿ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಪಿ.ಕೆ.ಕಿಶನ್ ಕುಮಾರ್ ರೈ, ಯಕ್ಷಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಕಲಾಕೇಂದ್ರದ ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ, ಕೋಶಾಧಿಕಾರಿ ಗಣೇಶ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಪ್ರಸಾದ್ ಸ್ವಾಗತಿಸಿದರು. ಯಕ್ಷಬೊಳ್ಳಿ ದಿನೇಶ್ ರೈ ಕಡಬ ನಿರೂಪಿಸಿದರು.
ಗೌರವಾರ್ಪಣೆ, ಪ್ರಮಾಣಪತ್ರ ವಿತರಣೆ
ಕಟೀಲು ಮೇಳದ ಭಾಗವತರಾದ ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ ಐಕಳ, ಮದ್ದಳೆಗಾರ ಶೆಣೈ ಪಳ್ಳಿ ಹಾಗೂ ರಂಗ ಸಹಾಯಕ ಕೇಶವ ನಾಯಕ್ ಅವರನ್ನು ಶಬರೀಶ ಯಕ್ಷಗಾನ ಕಲಾಕೇಂದ್ರದ ವತಿಯಿಂದ ಗೌರವಿಸಲಾಯಿತು. ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಯಕ್ಷಗುರು ಪ್ರಶಾಂತ್ ಶೆಟ್ಟಿ ಶಿಷ್ಯವೃಂದ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಿತು.