

ತುಮಕೂರು : ನಿಗದಿತ ಗುರಿ ಸಾಧಿಸದೆ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡಬಾರದು. ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದರೊಂದಿಗೆ ಗ್ರಾಮೀಣ ವಸತಿ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಸದ ಜಿ.ಎಸ್.ಬಸವರಾಜು ತಾಕೀತು ಮಾಡಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣ ವಸತಿ ಹಾಗೂ ಸಂಸದರ ಆದರ್ಶ ಗ್ರಾಮ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮೀಣ ವಸತಿ ಯೋಜನೆಯ ನಿಗದಿತ ಗುರಿ ಸಾಧಿಸದೇ ತಪ್ಪು ಮಾಹಿತಿ ನೀಡಿ ಸಭೆ ದಾರಿ ತಪ್ಪಿಸಬೇಡಿ. ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಯೋಜನೆಯನ್ನು ನೂರರಷ್ಟು ಯಶಸ್ವಿಗೊಳಿಸಿ ಎಂದು ಛಾಟಿ ಬೀಸಿದರು.
ಜಾಗ ಗುರುತಿಸಿ: ಗ್ರಾಮೀಣ ವಸತಿ ಯೋಜನೆಯಡಿ ಗುರುತಿಸಿರುವ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ನಿವೇಶನದ ಹಕ್ಕುಪತ್ರ ನೀಡಿ. ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸಿ ವಸತಿ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.
ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸುವ ಸೌಲಭ್ಯದ ಗುರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಜತೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಆ ಮೂಲಕ ಜನರಲ್ಲಿ ಭರವಸೆ ಮೂಡಿಸುವ ಕೆಲಸವನ್ನು ಮಾಡಿ ಎಂದರು.
ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಬೇಕು. ಆಯಾ ವರ್ಷದ ಗುರಿಯನ್ನು ಅದೇ ವರ್ಷವೇ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಅಧಿಕಾರಿಗಳ ನಿರಾಸಕ್ತಿ: ಬಹುತೇಕ ಎಲ್ಲ ಇಲಾಖೆಗಳು ವಸತಿ ಯೋಜನೆಯಡಿ ನಿವೇಶನ ಕಲ್ಪಿಸುವ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಆಸಕ್ತಿ ವಹಿಸಿಲ್ಲ. 2016ರಿಂದಲೂ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ. ವಸತಿ ಯೋಜನೆಯಡಿ ಗುರುತಿಸಲ್ಪಟ್ಟ ಫಲಾನುಭವಿಗಳಿಗೆ ನಿವೇಶನ ಕಲ್ಪಿಸಬೇಕು ಎಂದು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಹೇಳಿದರು.
ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ದಿಶಾ ಸಮಿತಿ ಸದಸ್ಯರಾದ ರಘೋತ್ತಮ್ ರಾವ್, ಪ್ರೇಮಾ ಹೆಗಡೆ, ಪಾಲಿಕೆ ಆಯುಕ್ತೆ ರೇಣುಕಾ, ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳು ನಿಖರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಅಸಮರ್ಪಕ ಮಾಹಿತಿ ನೀಡಬಾರದು. ಇದರಿಂದ ಯೋಜನೆಯ ಅನುಷ್ಠಾನ ಯಶಸ್ವಿಯಾಗುವುದಿಲ್ಲ. ವೈ.ಎಸ್. ಪಾಟೀಲ ಜಿಲ್ಲಾಧಿಕಾರಿ ವಸತಿ ಯೋಜನೆಯನ್ನು ಇಲಾಖೆಗಳು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಮೂಲಕ ನಿಗದಿತ ಗುರಿಯನ್ನು ಸಾಧಿಸಬೇಕು. ನೈಜ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಸಿಗಬೇಕು. ಅನರ್ಹರಿಗೆ ಈ ಯೋಜನೆ ಸೌಲಭ್ಯ ದೊರೆಯದಂತೆ ಎಚ್ಚರ ವಹಿಸಬೇಕು. ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ