

ತುಮಕೂರು : ಹಿಂದುಳಿದ ವರ್ಗಗಳ ಜನರು ತಮ್ಮ ಹಕ್ಕು ಹಾಗೂ ಜವಾಬ್ದಾರಿ ಮರೆತಿರುವ ಪರಿಣಾಮ ದುಸ್ಥಿತಿಗೆ ತಲುಪಿದ್ದೇವೆ ಎಂದು ಜಿಲ್ಲಾ ಜಾತ್ಯತೀತ ವೇದಿಕೆ ಅಧ್ಯಕ್ಷ ಟಿ.ಆರ್.ಆಂಜನಪ್ಪ ಹೇಳಿದರು.
ನಗರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ವತಿಯಿಂದ ಹಿಂದುಳಿದ ವರ್ಗಗಳ ರಾಜಕೀಯ, ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಹಾಗೂ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಬಲ ಏನು ಎಂಬುದನ್ನು 1996ರ ಉಪಚುನಾವಣೆಯಲ್ಲಿ ಈ ಜಿಲ್ಲೆಗೆ ತೋರಿಸಿಕೊಟ್ಟಿದ್ದೇವೆ. ಮತ್ತೊಮ್ಮೆ ಅಂತಹ ಒಗ್ಗಟ್ಟನ್ನು ನಾವೆಲ್ಲರೂ ಪ್ರದರ್ಶಿಸಬೇಕಾಗಿದೆ. ಅದರಲ್ಲಿಯೂ ಹಿಂದುಳಿದ ವರ್ಗದ ಯುವ ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಮೊದಲು ನಾವೆಲ್ಲರೂ ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವತ್ತ ನೆರವಾಗೋಣ. ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಯಿಂದ ವಂಚಿತರಾಗುವ ಸಮುದಾಯದ ಪರವಾಗಿ ನಾವೆಲ್ಲರೂ ನಿಲ್ಲೋಣ. ಹಿಂದುಳಿದ ಸಮುದಾಯಗಳ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯುವುದು ಹೇಗೆ ಎಂಬ ಚರ್ಚೆ ನಡೆಸಲು ಸಭೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಅಭಿಪ್ರಾಯಪಟ್ಟರು.
ದೊಡ್ಡ ಮೀನು ಸಣ್ಣ ಮೀನನ್ನು ತಿನ್ನುತಿದೆ ಎನ್ನವ ಪರಿಸ್ಥಿತಿ ನಮ್ಮದು. ದೊಡ್ಡ ದೊಡ್ಡ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿ, ಒಂದೇ ದಿನದಲ್ಲಿ ಅಧ್ಯಕ್ಷರನ್ನು ನೇಮಿಸಿ, ಅನುದಾನವನ್ನು ನೀಡುತ್ತಾರೆ. ಆದರೆ, ಶಿರಾ ಉಪಚುನಾವಣೆಯಲ್ಲಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ. ಹಾಗಾಗಿ ಮೊದಲು ಒಕ್ಕೂಟವನ್ನು ನೋಂದಣಿ ಮಾಡಿಸಿ, ನಂತರ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಒಕ್ಕೂಟವನ್ನು ಪ್ರಜಾಸತ್ತಾತ್ಮಕವಾಗಿ ಬಲಗೊಳಿಸೋಣ ಎಂದು ನಿವೃತ್ತ ತಹಸೀಲ್ದಾರ್ ಜಿ.ಎಂ.ಸಣ್ಣಮುದ್ದಯ್ಯ ಹೇಳಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಕುಮಾರ್, ನಗರಸಭೆ ಮಾಜಿ ಸದಸ್ಯ ಗೋಪಾಲ್, ಗಾಣಿಗ ಸಮಾಜದ ಕುಮಾರಸ್ವಾಮಿ, ಕುರುಬ ಸಮಾಜದ ಎಸ್.ನಾಗಣ್ಣ, ಜೈನ ಸಮಾಜದ ದಿನೇಶ್ ಗುಂಡಣ್ಣ, ಸುರೇಶ್, ಈಡಿಗ ಸಮಾಜದ ಮಲ್ಲಸಂದ್ರ ಶಿವಣ್ಣ, ಸವಿತಾ ಸಮಾಜದ ಮಂಜೇಶ್, ಅಲ್ಪಸಂಖ್ಯಾತ ಸಮಾಜದ ನಯಾಜ್, ವೈಶ್ಯ ಸಮಾಜದ ಅಮರನಾಥ್, ಸಾದರ ಸಮಾಜದ ಶಿವಕುಮಾರ್,ರಾವತ್ ಸಮಾಜದ ಮೋಹನ್,ಕುರುಹೀನ ಶೆಟ್ಟಿ ಸಮಾಜದ ಅನಿಲ್‌ಕುಮಾರ್, ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.