ಸಬೂಬು ಹೇಳದೆ ಪರಿಹಾರ ನೀಡಿ ; ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸೂಚನೆ ; ರೈತರನ್ನು ತಲುಪದ ಇಲಾಖೆಗಳು ಇದ್ದರೆಷ್ಟು, ಬಿಟ್ಟರೆಷ್ಟು ?

DSC_1137
Published on

ತುಮಕೂರು : ರೈತರ ಮನೆ ಬಾಗಿಲಿಗೆ ಯೋಜನೆಗಳನ್ನು ತೆಗೆದುಕೊಂಡು ಹೋಗದಿದ್ದರೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಇದ್ದರೂ ನಿಷ್ಪ್ರಯೋಜಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ಹೊರಹಾಕಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಮೊದಲ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಕೃಷಿ ಬಗ್ಗೆ ರೈತರು ನಿಮಗಿಂತ ಅಪಾರ ಜ್ಞಾನವುಳ್ಳವರು. ಸರ್ಕಾರದ ಸವಲತ್ತುಗಳನ್ನು ರೈತರ ಮನೆಬಾಗಿಲಿಗೆ ಹೋಗಿ ತಲುಪಿಸದಿದ್ದರೆ ಇಲಾಖೆ ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಬೇಸರಿಸಿದರು. ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡಬೇಕಾದ ಸ್ಪ್ರಿಂಕಿಲರ್ ಸೇರಿ ವಿವಿಧ ಉಪಕರಣಗಳನ್ನು ನೀಡಲು ವಿಳಂಬವಾಗಿದ್ದು, ಅರ್ಹ ರೈತರಿಗೆ ಮಾ.15ರೊಳಗಾಗಿ ಸೌಲಭ್ಯಗಳನ್ನು ಒದಗಿಸಬೇಕು. ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬಕ್ಕೆ ಸಬೂಬು ಹೇಳದೆ ಪರಿಹಾರ ಒದಗಿಸಬೇಕು ಎಂದರು.

ಆಸ್ಪತ್ರೆಗಳಲ್ಲಿ ಕಮೀಷನ್ ದಂಧೆ: ತಾಲೂಕು ಆಸ್ಪತ್ರೆಗಳಲ್ಲಿ ಕಮಿಷನ್ ದಂಧೆ ಇದೆ. ಲ್ಯಾಬೋರೇಟರಿಗಳಿದ್ದರೂ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿದೆ. ಸರ್ಕಾರಿ ಲ್ಯಾಬ್ ಟೆಕ್ನಿಷಿಯನ್‌ಗಳೇ ಹೊರಗಡೆ ಲ್ಯಾಬ್ ಇಟ್ಟಿರುತ್ತಾರೆ. ವೈದ್ಯರೂ ನರ್ಸಿಂಗ್ ಹೋಂಗಳನ್ನಿಟ್ಟಿದ್ದು ಸರ್ಕಾರದ ಆಸ್ಪತ್ರೆಗಳನ್ನು ಸದೃಢಗೊಳಿಸುವುದು ಬಿಟ್ಟು ಬಡವರಿಗೆ ಆರೋಗ್ಯ ಸೇವೆ ಸಿಗದಂತೆ ವಂಚಿಸಲಾಗುತ್ತಿದೆ ಎಂದು ಸಚಿವ ಆರಗ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ಎಂಎಲ್ಸಿ ಚಿದಾನಂದ ಎಂ.ಗೌಡ, ಶಿರಾದಲ್ಲಿ ಗಂಡ ಸರ್ಕಾರಿ ಆಸ್ಪತ್ರೆ ವೈದ್ಯನಾಗಿದ್ದರೆ, ಹೆಂಡತಿ ಖಾಸಗಿ ನರ್ಸಿಂಗ್ ಹೋಂ ಇಟ್ಟಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಗುಂಪುಗಾರಿಕೆ ಇದ್ದು, ಬಡವರಿಗೆ ಇಲ್ಲಿ ಆರೋಗ್ಯ ಸೇವೆ ಸಿಗದಂತಾಗಿದೆ ಎಂದರು. ಬಹಳ ವರ್ಷಗಳಿಂದ ತಳವೂರಿರುವ ಟಿಎಚ್‌ಒ ಬಗ್ಗೆಯೂ ಶಾಸಕ ಡಾ.ಸಿ.ಎಂ.ರಾಜೇಶಗೌಡ ಸಭೆಯ ಗಮನಸೆಳೆದರು.

7560 ವಸತಿ ಗುರಿ, ಸಾಧನೆ 9908: ಜಿಲ್ಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 7560 ವಸತಿಯ ಗುರಿ ನೀಡಲಾಗಿದೆ. ಆದರೆ, ಪ್ರಗತಿಯೇ 9908 ಎಂದು ಜಿಪಂ ವತಿಯಿಂದ ನೀಡಿದ್ದ ಅಂಕಿ, ಅಂಶ ಸಭೆಯಲ್ಲಿ ಗೊಂದಲ ಮೂಡಿಸಿತು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದರಾದರೂ ಯಾವೊಬ್ಬ ಅಧಿಕಾರಿಯೂ ಸರಿಯಾಗಿ ಉತ್ತರಿಸದೆ ಪರದಾಡಿದರು.

ಪರ್ಸಂಟೇಜ್ ಆಡಿಯೋ ಕೊಡೋಣ: ಜಿಪಂ ಹಣಕಾಸು ಅಧಿಕಾರಿ ವಿರುದ್ಧ ಸಚಿವ ಬಿ.ಸಿ.ನಾಗೇಶ್ ಸಭೆಯಲ್ಲಿ ಹರಿಹಾಯ್ದರು, ಬಿಲ್ ಪೆಂಡಿಂಗ್ ಮಾಡಲಾಗುತ್ತಿದೆ ಎಂಬ ಆರೋಪ ನಿರಾಕರಿಸಲು ಮುಂದಾದ ಜಿಪಂ ಹಣಕಾಸು ಅಧಿಕಾರಿಗೆ ದಾಖಲೆಗಳ ಸಮೇತ ನಾನು ನಿನ್ನ ಅಕ್ರಮದ ಬಗ್ಗೆ ಎಲ್ಲರ ಮುಂದೆ ಹೇಳಲೇನು, ಆಡಿಯೋ ಕೇಳಿಸಲೇನು ಎಂದು ಗುಡುಗಿದರು.

ಶಾಸಕರಾದ ಮಸಾಲಾ ಜಯರಾಂ, ಜಿ.ಬಿ.ಜ್ಯೋತಿಗಣೇಶ್, ತಿಪ್ಪೇಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಸ್‌ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಇದ್ದರು.

ಅಡಕೆ ಬೆಲೆನೂ ನೆಲಕಚ್ಚುತ್ತೆ : ಇದೇ ರೇಟ್ ಇದ್ರೆ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚಲಿದೆ. ಮಲೆನಾಡಿಗೆ ಸೀಮಿತವಾಗಿದ್ದ ಅಡಕೆಯನ್ನು ಬಯಲುಸೀಮೆಯಲ್ಲೂ ಬೆಳೆಯಲಾಗುತ್ತಿದೆ. ಸದ್ಯಕ್ಕೆ ಹೊರಗಡೆಯಿಂದ ಆಮದು ಮಾಡಿಕೊಳ್ಳಲು ಅವಕಾಶ ಕೊಡದೆ ಇರುವುದರಿಂದ ಧಾರಣೆ 45-46 ಸಾವಿರ ಇದೆ. ಎಲ್ರೂ ಬೆಳೆಯಲಿಕ್ಕೆ ಶುರು ಮಾಡಿಬಿಟ್ಟರೆ ಬೆಲೆ ನೆಲಕಚ್ಚುತ್ತೆ. ರೈತರನ್ನು ದ್ವೇಷ ಮಾಡಿದ್ರೆ ಹೇಗೆ, ಅವರನ್ನು ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡಿ ಎಂದು ಸಚಿವರು ಹೇಳಿದರು.

ಶೇಂಗಾ ಪ್ಯಾಕೇಜ್ ಚರ್ಚೆ : ಜಿಲ್ಲೆಯಲ್ಲಿ ಶೇಂಗಾ ಸೇರಿ ಎಣ್ಣೆ ಕಾಳು ಬೆಳೆಯುವ ಶಿರಾ, ಪಾವಗಡ, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದೆ. ಶೇಂಗಾ ಬೆಳೆಗೆ ಸಂಬಂಧಿಸಿದಂತೆ ಹಿಂದಿನ 5 ವರ್ಷಗಳ ಅವಧಿಯ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದಲ್ಲಿ ವಿಶೇಷ ಪ್ಯಾಕೇಜ್‌ನಡಿ ಪರಿಹಾರ ಕಲ್ಪಿಸುವ ಬಗ್ಗೆ ಸಿಎಂ ಜತೆ ಚರ್ಚಿಸಲಾಗುವುದು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಮಳೆ ಬಾರದ ಕಾರಣ ಶೇಂಗಾ ಬೆಳೆ ನಷ್ಟವಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಸಭೆಗೆ ಮಾಹಿತಿ ನೀಡಿದರು.

ನೀವು ಬಂದಮೇಲೆ ಅಭಿವೃದ್ಧಿ ಕುಂಠಿತ : ಜಿಲ್ಲೆಯಲ್ಲಿ ನೀವೇಳಿದ್ದೇ ಕಾನೂನು ಎಂಬಂತಾಗಿದೆ, ನೀವು ಬಂದ ಮೇಲೆಯೇ ಅಭಿವೃದ್ಧಿ ಕುಂಠಿತವಾಗಿದೆ. ತುರುವೇಕೆರೆ ತಾಲೂಕಿನಲ್ಲಿ ಒಂದೂ ಕೆಲಸವಾಗ್ತಿಲ್ಲ ಎಂದು ಶಾಸಕ ಮಸಾಲಾ ಜಯರಾಂ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ವಿರುದ್ಧ ಹರಿಹಾಯ್ದರು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ ಆಯಾ ಗ್ರಾಪಂ ಹೊಣೆ, ಅವರೇ ಕ್ರಿಯಾಯೋಜನೆ ತಯಾರಿಸಿಕೊಂಡು ಸಮಸ್ಯೆ ಬಗೆಹರಿಸಬೇಕು ಎಂಬ ಸಿಇಒ ಉತ್ತರಕ್ಕೆ ಜಯರಾಂ ಕೆಂಡಾಮಂಡಲರಾದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹಣದ ಸಮಸ್ಯೆ? : ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಹಣಕಾಸಿನ ತೊಂದರೆಯಾಗಿದೆ ಎಂದು ಇಂಜಿನಿಯರ್ ಮಾಹಿತಿ ಬಿಚ್ಚಿಟ್ಟರು. ಶೇ.21 ಹಣ ಬಿಡುಗಡೆಯಾಗಿದ್ದರೂ ಕೆಲಸವೇಕೆ ವಿಳಂಬ? ಕೂಡಲೇ ಎಲ್ಲರಿಗೂ ನೋಟಿಸ್ ನೀಡಿ ಕೆಲಸ ಮಾಡದವರ ಗುತ್ತಿಗೆ ರದ್ದುಮಾಡಿ ಎಂದು ಸಚಿವರು ಸೂಚಿಸಿದರು. ಹಳೆಯ ಕಾಲದ ಶಾನುಭೋಗರಂತೆ ಆಡಳಿತ ನಡೆಸುತ್ತಿದ್ದೀರಾ, ಹಳೆಯ ಫೈಲ್ ರಾಶಿ ಹಾಕಿಕೊಂಡು ಕಥೆ ಹೇಳ್ತಿದಿರಾ.. ಎಲ್ಲ ದಾಖಲೆಗಳು ಡಿಜಿಟಲೀಕರಣವಾಗಿದ್ದರೂ ಪ್ರಗತಿಯಾಗುತ್ತಿಲ್ಲ, ನಿಮ್ಮನ್ನೆಲ್ಲಾ ಬದಲಾಯಿಸದೇ ದೇಶಕ್ಕೆ ಉಳಿಗಾಲವಿಲ್ಲ ಎಂದು ಭೂಸ್ವಾಧೀನ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.

30 ವರ್ಷ ಆದ್ರು 15 ಮನೆಗಳಿಗೆ ವಿದ್ಯುತ್ ಇಲ್ಲ ! : ಗುಬ್ಬಿ ತಾಲೂಕು ಮಾವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಗದ್ದೆಹಳ್ಳಿಯಲ್ಲಿ 15 ಮನೆಗಳಿಗೆ 30 ವರ್ಷ ಆದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಬೆಳಕು ಯೋಜನೆ ಅನುಷ್ಠಾನ ಮಾಡಿಲ್ಲ ಎಂದು ಮಸಾಲಾ ಜಯರಾಂ ಸಭೆಯಲ್ಲಿ ಬೆಸ್ಕಾಂ ಎಸ್‌ಇ ಲೋಕೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ, ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಒದಗಿಸದ ಗ್ರಾಮಕ್ಕೆ ಜಿಪಂ ಸಿಇಒ ಭೇಟಿ ನೀಡಿ ಅಲ್ಲಿನ ಪಿಡಿಒ ಅಮಾನತು ಮಾಡಬೇಕು. ಇನ್ನು ಸ್ಥಳೀಯ ಬೆಸ್ಕಾಂ ಅಧಿಕಾರಿಯನ್ನೂ ಅಮಾನತು ಮಾಡಿ. ಮಾರ್ಚ್ ಅಂತ್ಯದೊಳಗೆ ಯೋಜನೆಯಡಿ ಎಲ್ಲ ವಸತಿಗಳಿಗೆ ವಿದ್ಯುತ್ ಸಂಪರ್ಕ ದೊರಕಿಸಿಕೊಡಬೇಕು ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net