ಸಬ್ ಕಾ ವಿನಾಶ್ ಪ್ರಧಾನಿ ಮೋದಿ ಸಾಧನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ

IMG-20220811-WA0139
Published on

ಗೌರಿಬಿದನೂರು: ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾ ಸಬ್ ಕಾ ವಿನಾಶ ಮಾಡುತ್ತಿರುವುದೇ ಮೋದಿಯ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.


ವಿದುರಾಶ್ವತ್ಥದಲ್ಲಿ ಗುರುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತೇವೆ. ಅಚ್ಛೇ ದಿನ್ ಬರುತ್ತದೆ ಎಂದು ಬಿಜೆಪಿಯವರು ಹೇಳುತ್ತಿರುತ್ತಾರೆ. ಆದರೆ ಇವರು ಯಾರಿಗೆ ಉದ್ಯೋಗ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ದುಪ್ಪಟ್ಟಾಗಿವೆ. ರೈತರಿಗೆ ರಸಗೊಬ್ಬರಗಳು ಸಿಗುತ್ತಿಲ್ಲ. ಹಾಗಾದರೆ ಅಚ್ಛೇ ದಿನ್ ಎಲ್ಲಿಗೆ ಬಂದಿದೆ.
ಯಾರಿಗೆ ಬಂದಿದೆ ಎಂದು ಕಿಡಿಕಾರಿದರು.


ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಕೊಟ್ಟಿದ್ದು ಕಾಂಗ್ರೆಸ್. ಸಾಮಾಜಿಕ ನ್ಯಾಯ, ಸಮಾನತೆ ಪರ ಇರುವ ಪಕ್ಷ ಕಾಂಗ್ರೆಸ್. ನಿರಂತರ 62 ವರ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದೆ. ಆದರೆ ಬಿಜೆಪಿ ಅಸಮಾನತೆಯ ಪರ ಒಲವು ಇರುವ ಪಕ್ಷ. ದೇಶದ ಸ್ವಾತಂತ್ರ್ಯಕ್ಕೆ ಹಾಗೂ ಅಭಿವೃದ್ಧಿಗೆ ಅವರ ಕೊಡುಗೆ ಏನು. ಬಿಜೆಪಿ, ಜೆಡಿಎಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಅಸಮಾತೆಯ ಮಾನಸಿಕತೆಯುಳ್ಳ ಬಿಜೆಪಿ ವಿರುದ್ಧ ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸ್ವಾತಂತ್ರ್ಯ, ಹೋರಾಟ ಹಾಗೂ ಕಾಂಗ್ರೆಸ್ ಬೇರೆಯಲ್ಲ. ಎರಡಕ್ಕೂ ಒಂದೇ ಇತಿಹಾಸ. ನಮ್ಮ ಪಕ್ಷ ಮಾಡಿರುವ ಅಭಿವೃದ್ಧಿಯ ಲವನ್ನು ಇಂದು ಜನ ಅನುಭವಿಸುತ್ತಿದ್ದಾರೆ. ಇವುಗಳು ಬಿಜೆಪಿ ನೀಡಿದ ಕೊಡುಗೆಯಲ್ಲ. ಬಿಜೆಪಿ ಭ್ರಷ್ಟಾಚಾರ ಬಿಟ್ಟರೆ ಏನು ಮಾಡುತ್ತಿದೆ. ಶೇ.40 ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣನೇ ಪ್ರಧಾನಿಗೆ ದೂರು ಬರೆದಿದ್ದಾನೆ. ಸಣ್ಣ-ಪುಟ್ಟ ಕೆಲಸಕ್ಕೂ ಲಂಚ ಕೊಡಬೇಕು. ಕರೊನಾ ಸಂದರ್ಭದಲ್ಲಿ ಬಿಜೆಪಿಯವರು ರೈತರ ಮುಖ ನೋಡಲಿಲ್ಲ. ಯಾವ ಮುಖ ಇರಿಸಿಕೊಂಡು ಮುಂದೆ ಜನರ ಬಳಿ
ಹೋಗಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.


ಕಾರ್ಯಕ್ರಮಕ್ಕೂ ಮೊದಲು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಲಾಯಿತು. 32 ಹುತಾತ್ಮರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ತಮ್ಮ ಭಾಷಣದ ವೇಳೆ ಅಜಾನ್ ಶಬ್ದ ಕೇಳಿದ್ದರಿಂದ ಕೆಲ ಸಮಯ ಭಾಷಣ ಮೊಟಕುಗೊಳಿಸಿದ ಸಿದ್ದರಾಮಯ್ಯ ಬಳಿಕ ಮುಂದುವರಿಸಿದರು.

ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಂಸದ ಉಗ್ರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ತ, ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕರಾದ ಡಾ. ಎಂ.ಸಿ.ಸುಧಾಕರ್, ಸಂಪಂಗಿ, ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಕೆ. ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇದಲವೇಣಿ ವೇಣು, ಅಶ್ವತ್ಥನಾರಾಯಣ್ ಇತರರು ಇದ್ದರು.

ಹರ್ ಘರ್ ತಿರಂಗಾ ನಾಟಕ: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ 52 ವರ್ಷಗಳಿಂದ ತ್ರಿವರ್ಣ ಧ್ವಜದ ಬಗ್ಗೆ ಗೌರವವಿರಲಿಲ್ಲ. ಬಿಜೆಪಿ, ಆರ್‌ಎಸ್‌ಎಸ್, ಹಿಂದು ಮಹಾಸಭಾ ಎಲ್ಲರೂ ತ್ರಿವರ್ಣ ಧ್ವಜ ವಿರೋಧಿಸುತ್ತಿದ್ದರು. ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ಏನೂ ಇಲ್ಲ. ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಈಗ ಹರ್ ಘರ್ ತಿರಂಗಾ ಎಂದು ನಾಟಕವಾಡುವ ಮೂಲಕ ನಮಗೆ ದೇಶಭಕ್ತಿ ಬಗ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ತ್ರಿವರ್ಣ ಧ್ವಜದ ಬಗ್ಗೆ ಪ್ರೀತಿ ಬಂದುಬಿಟ್ಟಿದೆ. ಎಲ್ಲರ ಕೈಗೂ ಬಾವುಟ ನೀಡಲಾರಂಭಿಸಿದ್ದಾರೆ. ಖಾದಿ ಬದಲಿಗೆ ಪಾಲಿಸ್ಟರ್ ಬಾವುಟ ನೀಡುವ ಮೂಲಕ ಅದರಲ್ಲೂ ಬ್ಯುಸಿನೆಸ್ ನಡೆಸಲಾರಂಭಿಸಿದ್ದಾರೆ. ಮೋದಿಗೆ ಮಾನ ಮರ್ಯಾದೆ ಇದ್ದರೆ ತಿರಂಗಾ ಸ್ವರೂಪ ಬದಲಿಸುವುದನ್ನು ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ಗೆ 135 ವರ್ಷಗಳ ಇತಿಹಾಸ: ಮಾರ್ಗಮಧ್ಯೆ ಗೌರಿಬಿದನೂರು ನಗರದಲ್ಲಿ ಪಾದಯಾತ್ರೆ ಸೇರಿಕೊಂಡ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ 135 ವರ್ಷಗಳ ಇತಿಹಾಸವಿದೆ. ಆದರೆ ಬಿಜೆಪಿಗೆ 42 ವರ್ಷಗಳ ಇತಿಹಾಸವಿದೆ. ಆರ್‌ಎಸ್‌ಎಸ್ ಬಿಜೆಪಿಯ ಒಬ್ಬರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಲ್ಲ. ಬ್ರಿಟಿಷರ ಬಳಿ ಗುಲಾಮಗಿರಿ ಮಾಡಿಕೊಂಡಿದ್ದವರು. ಇಂದು ಅದೇ ಬ್ರಿಟಿಷ್ ಮಾದರಿಯಲ್ಲಿ ನಮ್ಮನ್ನು ನಮ್ಮ ನಾಯಕರನ್ನು ಬೆದರಿಸುತ್ತಿದ್ದಾರೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕ್ವಿಟ್ ಇಂಡಿಯಾ ಹೋರಾಟ ಮಾಡಿದ ಇತಿಹಾಸ ಕಾಂಗ್ರೆಸ್‌ಗಿದೆ. ಬ್ರಿಟಿಷರಂತೆ ಬಿಜೆಪಿಯವರು ಹಾಕುವ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.

ಎಲ್ಲೆಲ್ಲೂ ಜನ ಜಾತ್ರೆ: ಅಲಕಾಪುರದ ಚನ್ನ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪಾದಯಾತೆಗೆ ಚಾಲನೆ ನೀಡಿದರು. ಅಲಕಾಪುರದಿಂದ ಪ್ರಾರಂಭವಾದ ಯಾತ್ರೆ ವಿವಿಧ ಗ್ರಾಮಗಳ ಮೂಲಕ ಗೌರಿಬಿದನೂರು ನಗರಕ್ಕೆ ಆಗಮಿಸಿ ಬಳಿಕ ಕಲ್ಲುಡಿ, ಚಿಕ್ಕ ಕುರುಗೋಡು, ವಿದುರಾಶ್ವತ್ಥದ ಕಡೆಗೆ ಯಾತ್ರೆ ಮುಂದುವರಿಯಿತು. ದಾರಿಯುದ್ದಕ್ಕೂ ನಾಯಕರ ಭಾಷಣ, ಸ್ವಾತಂತ್ರ್ಯದ ಜಯಘೋಷ. ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸಲಾಯಿತು. ಶಾಸಕ ಶಿವಶಂಕರರೆಡ್ಡಿ ಜತೆಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಾಥ್ ನೀಡಿದರು.

ಪಾದಯಾತ್ರೆಗೆ ತಿರಂಗಾ ರಂಗು: ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಹುತೇಕ ಮಂದಿ ತಿರಂಗಾ ಧ್ವಜ ಹಿಡಿದು ಸಾಗಿದರು. ಮಹಾತ್ಮ ಗಾಂಧಿ, ಸುಭಾಷ ಚಂದ್ರ ಬೋಸ್, ಭಗತ್‌ಸಿಂಗ್ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟ ಗಾರ ವೇಷಧಾರಿ ಗಳು ಪಾದಯಾತ್ರೆಗೆ ವಿಶೇಷ ರಂಗು ಮೂಡಿಸಿದರು. ವಿವಿಧ ಜಾನಪದ ಕಲಾತಂಡಗಳು ಮತ್ತಷ್ಟು ಮೆರುಗು ನೀಡಿದವು. ಬೃಹತ್ ಪಾದಯಾತ್ರೆಯ ಮೂಲಕ ರಾಜಕೀಯ ವಿರೋಧಿಗಳಿಗೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ತೋರಿಸಿತು.

ಆಪರೇಷನ್ ಆದವರಿಗೆ ಪಾಠ ಕಲಿಸುತ್ತಾರೆ: ಚಿಕ್ಕಬಳ್ಳಾಪುರದಲ್ಲಿ ನಮ್ಮ ಪಕ್ಷದಿಂದ ಗೆದ್ದ ಶಾಸಕರು ಆಪರೇಷನ್ ಕಮಲದ ಪಾಲಾದರು. ಅವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷದಿಂದ ಐದು ಶಾಸಕರು ಆಯ್ಕೆಯಾಗಲಿದ್ದಾರೆ. ಸುದೀರ್ಘ ರಾಜಕೀಯ ಅನುಭವವುಳ್ಳ ಹಾಗೂ ಪಕ್ಷನಿಷ್ಠರಾದ ಕ್ಷೇತ್ರದ ಶಾಸಕ ಶಿವಶಂಕರರೆಡ್ಡಿ ನಮ್ಮ ಪಕ್ಷ ಹಾಗೂ ಈ ರಾಜ್ಯದ ಆಸ್ತಿ. ಯಾವುದೇ ಕಾರಣಕ್ಕೂ ಅವರನ್ನು ಕೈಬಿಡಬೇಡಿ ಎಂದು ಡಿಕೆಶಿ ಮನವಿ ಮಾಡಿದರು.

ವ್ಯಾಪಾರಿಗಳಿಗೆ ಅವಕಾಶ ನೀಡಬೇಡಿ: ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪುಣ್ಯಭೂಮಿ ವಿದುರಾಶ್ವತ್ಥ. ಅಂದು ನಡೆದ ಹೋರಾಟದಲ್ಲಿ 32 ಜನ ಇಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಅವರನ್ನು ನಾವು ಸ್ಮರಿಸಬೇಕು. ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ವ್ಯಾಪಾರಿಗಳಿಗೆ ಅವಕಾಶ ನೀಡಬೇಡಿ. ಶಿವಶಂಕರರೆಡ್ಡಿ ಅವರಂತಹ ಸಜ್ಜನ ವ್ಯಕ್ತಿ ಗೆಲ್ಲಿಸಿ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಾವು ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ಉಚಿತ 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತದಿಂದ ದೇಶ ಅಧೋಗತಿಯತ್ತ ಸಾಗುತ್ತಿದೆ. ಕಾರ್ಪೋರೇಟ್ ವಲಯಗಳಿಗೆ ಉತ್ತೇಜನ ನೀಡುತ್ತಿದೆ. ಜನಸಾಮಾನ್ಯರನ್ನು ಕಡೆಗಣಿಸುತ್ತಿದೆ. ಜನರೇ ಇದಕ್ಕೆ ತಕ್ಕ ಪಾಠ ಕಲಿಸಬೇಕು.
- ಶಿವಶಂಕರರೆಡ್ಡಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net