

ಮೊಳಕಾಲ್ಮೂರು: ಸಮಾಜದ ಮುಖ್ಯವಾಹಿನಿಗೆ ಅಕ್ಷರ ಜ್ಞಾನ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ಸಾಕ್ಷರ ಭಾರತ್ ಯೋಜನೆ ಅತ್ಯಂತ ಮಹತ್ವಪೂರ್ಣ ಪಡೆದುಕೊಂಡಿದೆ ಎಂದು ಬಿಇಒ ಕೆ.ತಿಪ್ಪೇಸ್ವಾಮಿ ಹೇಳಿದರು.
ಲೋಕ ಶಿಕ್ಷಣ ವಿಭಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಭಾಗಿತ್ವದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣ ವ್ಯವಸ್ಥೆಯಲ್ಲಿ ನಾಗರಿಕತೆಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಶಿಕ್ಷಣ ಮಹತ್ವ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಸಾಕ್ಷರರನ್ನಾಗಿಸಲು ಸಾಕ್ಷರ ಭಾರತ್ ಯೋಜನೆ ಸಮರ್ಪಕ ಅನುಷ್ಠಾನದಿಂದ ರಾಜ್ಯದಲ್ಲಿ ಗಣನೀಯ ಸುಧಾರಣೆ ಕಂಡಿದೆ. ವಿಶೇಷವಾಗಿ ಗ್ರಾಮೀಣರು ನಿರೀಕ್ಷಿತ ಗುರಿ ಮುಟ್ಟಿದರೆ ಬಡತನದಿಂದ ಮುಕ್ತರಾಗಿ ಆರ್ಥಿಕ ಸಬಲೀಕರಣ ಹೊಂದಲು ಸಾಧ್ಯ ಎಂದರು.
ಮುಖ್ಯಶಿಕ್ಷಕ ರವೀಂದ್ರನಾಥ ಮಾತನಾಡಿ, ಪ್ರಸ್ತುತ ಶಿಕ್ಷಣ ಕ್ಷೇತ್ರವು ನಗರ-ಪಟ್ಟಣವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಕ್ರಾಂತಿಕಾರಿ ಬೆಳವಣಿಗೆ ಕಂಡಿದೆ. ಆದರೆ, ವಯಸ್ಕರಲ್ಲಿ ಇನ್ನೂ ಅನಕ್ಷರತೆ ಕಾಡುತ್ತಿದೆ ಎಂದು ವಿಷಾದಿಸಿದರು.
ವಿದ್ಯೆ ಕಲಿಯುವ ಮಕ್ಕಳು ಕುಟಂಬದ ಸದಸ್ಯರನ್ನು ಅಕ್ಷರವಂತರನ್ನಾಗಿಸಲು ಶ್ರಮಿಸುವ ಜತೆಗೆ ಅವರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಬೇಕು. ವಯಸ್ಕರ ಶಿಕ್ಷಣ ಶಾಲೆಯಲ್ಲಿ ಕಲಿಯಲು ನಿರಾಸಕ್ತಿ ತೋರುವ ಮಂದಿಗೆ ಮನೆಯೇ ಪಾಠ ಶಾಲೆಯಾದರೆ ಸಂಪೂರ್ಣ ಸಾಕ್ಷರ ನಿರ್ಮಾಣ ಸಾಧ್ಯ ಎಂದರು.
ವೈಯಕ್ತಿಕ ಕೆಲಸದ ಒತ್ತಡದ ನಡುವೆ ಬಿಡುವಿನ ವೇಳೆಯಲ್ಲಿ ಅಕ್ಷರ ಅಭ್ಯಾಸ ಮಾಡುತ್ತ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೆ ಇನ್ನೊಬ್ಬರ ಆಶ್ರಯ ಪಡೆಯುವುದು ತಪ್ಪಲಿದೆ, ಜತೆಗೆ ಮೋಸ ಹೋಗುವುದುಕ್ಕೂ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಬಿಆರ್‌ಪಿ ಮಂಜುನಾಥ, ಸಿಆರ್‌ಪಿ ಮೊಹನ್, ನೋಡಲ್ ಅಧಿಕಾರಿ ಎಸ್.ಆರ್.ತಿಪ್ಪೇಸ್ವಾಮಿ, ಶಿಕ್ಷಕರಾದ ರಾಜಣ್ಣ, ನಾಗಭೂಷಣರಡ್ಡಿ, ರಂಗನಾಥ, ಶಾಂತವೀರಣ್ಣ ಇದ್ದರು.