ಕಾಲೇಜು ಉಳಿವಿಗಾಗಿ ಪೊರಕೆ ಚಳವಳಿ

1-GPT-1A
Published on


ವಿಜಯವಾಣಿ ಸುದ್ದಿಜಾಲ ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿಯ ರಾಯಭಾಗ್ ತಾಲೂಕಿನ ಹಾರೋಗೇರಿಗೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶನಿವಾರ ವಿದ್ಯಾರ್ಥಿಗಳು ಪೊರಕೆ ಚಳವಳಿ ನಡೆಸಿದರೆ ಜನಪ್ರತಿನಿಧಿಗಳು ಹೋರಾಟ ಬೆಂಬಲಿಸಿ ಬೀದಿಗಿಳಿದಿದ್ದಾರೆ.
ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾ ರೈತ ಸಂಘ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಪಾಲಕರ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಶನಿವಾರ ಗ್ರಾಮದ ಮಹಿಳೆಯರು ಶ್ರೀಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದಿಂದ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ರಸ್ತೆಯವರೆಗೂ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು. ನಂತರ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದೇ ವೇಳೆ ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ.ಬೊಮ್ಮಯ್ಯ, ಪಿ.ಚನ್ನಪ್ಪ, ಕೆರೆಹಳ್ಳಿ ನವೀನ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕನ್ನಡ ಪರ ಸಂಘಟನೆಗಳು ಭಾಗವಹಿಸಿ ಬೆಂಬಲ ನೀಡಿದವು.
ಕಾಲೇಜು ಉಳಿಸುವ ಅಭಿಯಾನಕ್ಕೆ ಕೈ ಜೊಡಿಸಿ ಗ್ರಾಮೀಣ ಪ್ರದೇಶದ ಮಕ್ಕಳು ಪದವಿ ಶಿಕ್ಷಣ ನಡೆಸಲು ಒಗ್ಗೂಡಬೇಕು. ಸರ್ಕಾರ ಏಕಾಏಕಿ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಿರುವುದು ಸರಿಯಲ್ಲ. ಕಾಲೇಜು ಉಳಿಸಿಕೊಳ್ಳಲಾಗದ ಶಾಸಕ ನಿರಂಜನ್‌ಕುಮಾರ್ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್, ಶಾಸಕ ನಿರಂಜನ್‌ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕಾಲೇಜು ಸ್ಥಳಾಂತರದ ಕುರಿತು ಸರ್ಕಾರದ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ರಸ್ತೆ ತಡೆ ನಡೆಸಿದ್ದ ಪರಿಣಾಮ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಬಳಿಕ ಪ್ರತಿಭಟನಾಕಾರರು ಆಂಜನೇಯಸ್ವಾಮಿ ದೇವಸ್ಥಾನದ ಬಳಿಗೆ ತೆರಳಿ ಧರಣಿ ಮುಂದುವರೆಸಿದರು. ರೈತಸಂಘದ ಮುಖಂಡರು, ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ?
ಕಳೆದ ಎರಡು ದಿನಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯೂ ಆಗಿರುವ ಪೊಲೀಸ್ ಸಿಬ್ಬಂದಿ ಪುತ್ರಿ ಶುಕ್ರವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಪತ್ತೆ ಕಾರ್ಯಕೈಗೊಳ್ಳಲಾಗಿದೆ.
ಆಕೆಯ ಸಂಪರ್ಕದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರ ಮನೆಗಳಿಗೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿಯೊಬ್ಬಳು ಶನಿವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ತಮ್ಮ ಮನೆ ಬಳಿಗೆ ಪೊಲೀಸರು ಬಂದಿದ್ದು ಮಾನಸಿಕವಾಗಿ ನೋವು ತಂದಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಆಕೆಯ ಜತೆಗಿದ್ದ ಸಹಪಾಠಿಗಳು, ಪ್ರತಿಭಟನೆಯಲ್ಲಿ ಭಾಗವಹಿಸಿರುವವರ ವಿವರವನ್ನು ಪೊಲೀಸರು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಏನಾದರು ತೊಂದರೆಯಾದರೂ ಪೊಲೀಸರೇ ನೇರಹೊಣೆಯಾಗುತ್ತಾರೆ ಎಂದು ಹೇಳಿದರು.
ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿರುವ ಪಿಎಸ್‌ಐ ರಾಧಾ, ಕಳೆದ ಮೂರು ದಿನಗಳಿಂದ ಪ್ರತಿಭಟನೆಗೆ ರಕ್ಷಣೆ ನೀಡಲಾಗುತ್ತಿದ್ದು ಧರಣಿ ಹತ್ತಿಕ್ಕುವ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net