ಸಂವೇದನೆ-ಸಂಘರ್ಷದಲ್ಲೂ ನಿರಾಳ ಬದುಕು: ಸಾರಾ ಅಬೂಬಕ್ಕರ್ ಸಾಹಿತ್ಯ ಬಣ್ಣಿಸಿದ ಮುದ್ದು ಮೂಡುಬೆಳ್ಳೆ

Mng_22 Jan_Saara new
Published on

ಮಂಗಳೂರು: ಲೇಖಕಿ ಸಾರಾ ಅಬೂಬಕ್ಕರ್ ತನ್ನ ಧರ್ಮಕ್ಕೆ ನಿಷ್ಠರಾಗಿದ್ದರು. ಬೇರೆ ಧರ್ಮಗಳ ಜತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಮುಸ್ಲಿಂ ಸಮುದಾಯದ ಆಚಾರ ಮತ್ತು ಆಚರಣೆ ಬಗ್ಗೆ ಅಧ್ಯಯನ ನಡೆಸಿ ತಮ್ಮ ಕಾದಂಬರಿಗಳಲ್ಲಿ ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರು ಎಂದು ಮಂಗಳೂರು ಆಕಾಶವಾಣಿ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕ ಮುದ್ದು ಮೂಡುಬೆಳ್ಳೆ ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಇದರ ಮಂಗಳೂರು ತಾಲೂಕು ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಖಾಸಗಿ ಸಭಾಭವನದಲ್ಲಿ ಸಾಹಿತಿ ದಿ.ಸಾರಾ ಅಬೂಬಕ್ಕರ್ ನೆನಪಿನಲ್ಲಿ ಭಾನುವಾರ ಆಯೋಜಿಸಿದ್ದ ‘ಸಾರ ಸಾಗರ ಸಾರಾ’ ಉಪನ್ಯಾಸ ನೀಡಿದರು.

ಸ್ತ್ರೀವಾದಿಯಾಗಿದ್ದ ಸಾರಾ ಮಾನವತಾವಾದಿಯೂ ಆಗಿದ್ದರು. ಸಂವೇದನೆ ಮತ್ತು ಸಂಘರ್ಷಗಳ ನಡುವೆ ನಿರಾಳವಾಗಿ ಬದುಕಿದ ಗಟ್ಟಿ ಮನಸ್ಸಿನ ಶಕ್ತಿಯಾಗಿದ್ದರು. ಮುಸ್ಲಿಂ ಸಮುದಾಯದಲ್ಲಿ ಸಾಹಿತ್ಯ ಲೋಕಕ್ಕೆ ಬಂದ ಕೆಲವೇ ಕೆಲವು ಅಪರೂಪದ ಬರಹಗಾರ್ತಿಗಳಲ್ಲಿ ಸಾರಾ ಅಬೂಬಕ್ಕರ್ ಒಬ್ಬರು. ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ಬಳಿಕ ಅವರ ಸಾಧನೆ ಶಿಖರವೇರಿತು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗೋವಿಂದದಾಸ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ.ಕೃಷ್ಣಮೂರ್ತಿ, ಬಂಡಾಯ ಸಾಹಿತ್ಯ ಉದಯಿಸಿದ್ದ ಕಾಲಘಟ್ಟದಲ್ಲಿ ಸಾರಸ್ವತ ಲೋಕಕ್ಕೆ ಸಿಕ್ಕ ಲೇಖಕಿ ಸಾರಾ ಅವರು. ಸ್ತ್ರೀ ಸಮುದಾಯದ ಸಂಕಷ್ಟಗಳನ್ನು ಬರೆಯುವ ಪ್ರಯತ್ನ ಮಾಡಿದವರು. ಪ್ರತಿರೋಧಗಳ ನಡುವೆ ಕಠಿಣ ನಿರ್ಧಾರ ತೆಗೆದುಕೊಂಡು ಯಶಸ್ವಿಯಾದವರು ಎಂದರು.

ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಕವಿ ರೇಮಂಡ್ ಡಿಕುನ್ಹಾ ತಾಕೊಡೆ ವಹಿಸಿದ್ದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

ಪುಷ್ಪಾರ್ಚನೆ, ಕವಿಗೋಷ್ಠಿ:

ಸಾರಾ ಅಬೂಬಕ್ಕರ್ ಭಾವಚಿತ್ರಕ್ಕೆ ಗಣ್ಯರಿಂದ ಮತ್ತು ಕವಿಗಳಿಂದ ಪುಷ್ಪಾರ್ಚನೆ ನಡೆಯಿತು. ಕವಿ ರಘು ಇಡ್ಕಿದು ಕವಿಗೋಷ್ಠಿ ಉದ್ಘಾಟಿಸಿದರು. ಬದ್ರುದ್ದೀನ್ ಕೂಳೂರು, ಅರುಣಾ ನಾಗರಾಜ್, ಸೌಮ್ಯಾ ಆರ್.ಶೆಟ್ಟಿ, ನಳಿನಾಕ್ಷಿ ಉದಯರಾಜ್, ಗೋಪಾಲಕೃಷ್ಣ ಶಾಸ್ತ್ರಿ, ಬಿ.ಸತ್ಯವತಿ ಭಟ್, ಎಸ್.ಕೆ.ಗೋಪಾಲಕೃಷ್ಣ ಭಟ್, ಆಕೃತಿ ಐ.ಎಸ್ ಭಟ್, ಉಮೇಶ್ ಕಾರಂತ್, ಗೀತಾ ಲಕ್ಷ್ಮೀಶ್, ಹೇಮಂತ್ ಕುಮಾರ್ ಡಿ., ಹಿತೇಶ್ ಕುಮಾರ್ ಎ., ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಪರಿಮಳಾ ಮಹೇಶ್, ಉರ್ಬನ್ ಡಿಸೋಜ, ಜೂಲಿಯಟ್ ಫರ್ನಾಂಡಿಸ್, ಚಂದ್ರಿಕಾ ಕೈರಂಗಳ, ಡಾ.ಸುರೇಶ್ ನೆಗಳಗುಳಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net