

ಕೆ.ಆರ್.ನಗರ: ಮಂಡಿಗನಗಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಅನುಷ್ಠಾನದ ವಿಚಾರದಲ್ಲಿ ಶಾಸಕ ಡಿ.ರವಿಶಂಕರ್ ಜಾತಿ ರಾಜಕೀಯ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಹೇಳಿದ್ದಾರೆ.
ಕಳೆದ ಅವಧಿಯಲ್ಲಿ ಕ್ಷೇತ್ರದ ಶಾಸಕರಾಗಿದ್ದ ಸಾ.ರಾ.ಮಹೇಶ್ ಅವರು ಸದರಿ ಯೋಜನೆಗೆ ಹಣ ಮಂಜೂರು ಮಾಡಿಸಿದ ನಂತರ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿತ್ತು. ಆದರೆ, ಗುತ್ತಿಗೆದಾರ ಮತ್ತು ಸಾ.ರಾ.ಮಹೇಶ್ ಅವರ ನಿರ್ಲಕ್ಷೃದಿಂದ ಕಾಮಗಾರಿ ಸ್ಥಗಿತವಾಗಿತ್ತು. ಕಾಮಗಾರಿ ವಿಳಂಬವಾಗಿದ್ದರಿಂದ ಅನುದಾನ ವಾಪಸ್ ಹೋಗಿ ಕ್ಷೇತ್ರದ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ಆ ಅನುದಾನವನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆಯೇ ಹೊರತು ಇದರಲ್ಲಿ ಶಾಸಕರ ಪಾತ್ರ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಲವು ರಸ್ತೆಗಳು ಮತ್ತು ಹಿಂದುಳಿದ ವರ್ಗಗಳ ಸಮುದಾಯ ಭವನದ ಕಾಮಗಾರಿಗಳಿಗೆ ನಮ್ಮ ನಾಯಕರಾದ ಡಿ.ರವಿಶಂಕರ್ ಅವರು ಅನುದಾನ ತಂದಿದ್ದರು. ಆದರೆ, ಆ ಸಮಯದಲ್ಲಿ ಸಾ.ರಾ.ಮಹೇಶ್ ಜಾತಿ ರಾಜಕೀಯ ಮಾಡಿ ಎಲ್ಲಾ ಕಾಮಗಾರಿಗಳು ನಡೆಯದಂತೆ ತಡೆದಿದ್ದರೆಂದು ಆರೋಪಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಮಂಡಿಗನಹಳ್ಳಿ ಏತ ನೀರಾವರಿ ಯೋಜನೆ ರದ್ದಾಗಿ ಆ ಭಾಗದ ಜನರಿಗೆ ತೊಂದರೆಯಾಗಿದ್ದನ್ನು ಮನಗಂಡ ಶಾಸಕ ಡಿ.ರವಿಶಂಕರ್ ಅವರು ಈಗ 50 ಕೋಟಿ ಹಣ ಮಂಜೂರು ಮಾಡಿಸಿ ಹೊಸ ಅಗ್ರಹಾರ ಮತ್ತು ಮಿರ್ಲೆ ಹೋಬಳಿಯ ಎಲ್ಲಾ ಗ್ರಾಮಗಳಿಗೂ ನೀರು ತುಂಬಿಸುವ ಬೃಹತ್ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದಿದ್ದಾರೆ.
ಸಾ.ರಾ.ಮಹೇಶ್ ಅವರು ಮಂಡಿಗನಹಳ್ಳಿ ಮತ್ತು ಸುತ್ತಮುತ್ತಲ 9 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು 20 ಕೋಟಿ ರೂ. ಮಂಜೂರು ಮಾಡಿಸಿದ್ದರು. ಆದರೆ, ಡಿ.ರವಿಶಂಕರ್ ಅವರು ಮಿರ್ಲೆ ಮತ್ತು ಹೊಸ ಅಗ್ರಹಾರ ಹೋಬಳಿಯ 35 ಕೆರೆಗಳಿಗೆ ಕಾವೇರಿ ಹಾಗೂ ಹೇಮಾವತಿ ನದಿಯಿಂದ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ 50 ಕೋಟಿ ಹಣ ಮಂಜೂರು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.