

ಯಾದಗಿರಿ: ಕರೊನಾ ಲಸಿಕೆಯನ್ನು ಯಶಸ್ವಿಯಾಗಿ ಪ್ರತಿಶತ 100ರಷ್ಟು ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದ್ದರೆ, ಹಲವು ಗ್ರಾಮಸ್ಥರು ಮಾತ್ರ ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸಲು ಹೊಸ ಹೊಸ ತಂತ್ರವನ್ನು ರೂಪಿಸುತ್ತಲೇ ಇದ್ದಾರೆ.
ಅದೇ ರೀತಿ ಯಾದಗಿರಿ ಜಿಲ್ಲಾಡಳಿತಕ್ಕೆ ಲಸಿಕೆ ಟಾರ್ಗೆಟ್‌ನ ಟೆನ್ಷನ್ ಶುರುವಾಗಿದೆ. ಏಕೆಂದರೆ ಲಸಿಕೆಯಿಂದ ತಪ್ಪಿಸಿಕೊಳ್ಳಲು ಬೆಳ್ಳಂ ಬೆಳಗ್ಗೆ ಮದ್ಯ ಸೇವಿಸುತ್ತಿದ್ದಾರೆ ಗ್ರಾಮಸ್ಥರು! ಬೆಳಗಿನ ವೇಳೆ ಲಸಿಕೆ ಹಾಕಲು ಆಶಾ ಕಾರ್ಯಕರ್ತರು ಬರುತ್ತಾರೆ ಎನ್ನುವ ಕಾರಣಕ್ಕೆ ಮದ್ಯ ಸೇವಿಸಿದರೆ ಅವರು ವಾಪಸ್ ಹೋಗುತ್ತಾರೆಂದು ಈ ದಾರಿ ಕಂಡುಕೊಂಡಿದ್ದಾರೆ!
ನಾನು ಕುಡಿದಿದ್ದೇನೆ, ಈಗ ಲಸಿಕೆ ಹಾಕಿಸಿಕೊಂಡು ಸತ್ತುಹೋಗಬೇಕಾ ಎಂದು ಒಬ್ಬ ಪ್ರಶ್ನಿಸಿದರೆ, ನನ್ನನ್ನು ಮುಟ್ಟಬೇಡಿ, ಫುಲ್ ಟೈಟ್ ಆಗಿದ್ದೇನೆ ಎಂದು ಮತ್ತೊಬ್ಬ ಹೇಳುತ್ತಾನೆ. ಹೀಗೆ ಅಲ್ಲಿಗೆ ಬಂದಿರುವ ಸಿಬ್ಬಂದಿಗೆ ಆವಾಜ್ ಹಾಕುತ್ತಿರುವ ಕಾರಣ, ಅವರು ಸುಸ್ತಾಗಿ ಹೋಗಿದ್ದಾರೆ. ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಮದ್ಯಸೇವನೆ ರಂಪಾಟ ಹೆಚ್ಚಾಗಿದೆ.
ಲಸಿಕೆ ಹಾಕುವವರು ಬಂದ ಕೂಡಲೇ ಓಡಿ ಹೋಗಿ ಮದ್ಯ ಕುಡಿಯುತ್ತಿದ್ದಾರೆ. ಅದೇ ಇನ್ನೊಂದು ಕಡೆ, ನಮಗೆ ಏನು ಆಗಿಲ್ಲ ನಾವು ಲಸಿಕೆ ಹಾಕಿಸಿಕೊಳ್ಳಲ್ಲ ನೀವು ಇಲ್ಲಿಂದ ಹೋಗಿ ನೀವು ಯಾಕೆ ಓಡಾಡುತ್ತಿದ್ದಿರಿ ಎಂದು ವ್ಯಕ್ತಿಯೊರ್ವ ಅವಾಜ್ ಹಾಕಿದರೆ, ಲಸಿಕೆ ಹಾಕಿಸಿಕೊಂಡ ನಂತರ ಏನಾದರೂ ಆದರೆ ಜವಾಬ್ದಾರರು ಯಾರು ಎಂದು ಕೇಳಿ ಒಬ್ಬ 8 ಲಕ್ಷ ಮೊದಲೇ ನೀಡಿ ಎಂದಿದ್ದಾನೆ!