ಡೀಸೆಲ್​ ಬದಲಿಗೆ ನೀರು ಹಾಕಿದ ರಾಯಚೂರು ಪೆಟ್ರೋಲ್​ ಬಂಕ್! ಕೆಟ್ಟು ನಿಂತ ವಾಹನಗಳು

petrolbunk
Published on

ರಾಯಚೂರು: ಪೆಟ್ರೋಲ್​, ಡೀಸೆಲ್​ ಬದಲು ನೀರಿನ ಮೂಲಕ ವಾಹನಗಳನ್ನು ಚಲಾಯಿಸುವಂಥ ಪ್ರಯೋಗಗಳನ್ನು ಕೆಲವರು ಮಾಡುತ್ತಿದ್ದಾರೆ. ಇದು ಬೇರೆಯ ಮಾತು. ಆದರೆ ರಾಯಚೂರಿನ ಪೆಟ್ರೋಲ್​ ಬಂಕ್​ ಒಂದರಲ್ಲಿ ಡೀಸೆಲ್​ ಬದಲು ನೀರನ್ನೇ ಹಾಕಿರುವ ಘಟನೆ ಬೆಳಕಿಗೆ ಬಂದಿದೆ!

ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಫಿಲ್ಲಿಂಗ್​ ಸ್ಟೇಷನ್​ ವಿರುದ್ಧ ಈ ಆರೋಪ ಕೇಳಿಬಂದಿದೆ. ಇಲ್ಲಿ ಡೀಸೆಲ್​ ತುಂಬಿಸಿಕೊಂಡಿದ್ದ ಲಾರಿ, ಟ್ರಕ್​ಗಳು ಹಾಗೂ ಕೆಲ ವಾಹನಗಳು ರಸ್ತೆಯ ಮಧ್ಯೆಯೇ ಕೆಟ್ಟುನಿಂತ ನಂತರ ವಿಷಯ ತಿಳಿದುಬಂದಿದೆ.

ಎರಡು ಕಾರುಗಳು, ಮೂರು ಟ್ರ್ಯಾಕ್ಟರ್​ ಮತ್ತು ಮೂರು ಲಾರಿಗಳು ಕೆಟ್ಟು ನಿಂತು ಹೋಗಿವೆ. ನಂತರ ಪರಿಶೀಲನೆ ಮಾಡಿದಾಗ ಪೆಟ್ರೋಲ್​ ಬಂಕ್​ನಲ್ಲಿ ಹಾಕಿರುವುದು ಡೀಸೆಲ್​ ಅಲ್ಲ, ಬದಲಿಗೆ ನೀರು ಎಂದು ತಿಳಿದುಬಂದಿದೆ.

ವಾಹನಗಳ ಮಾಲೀಕರು ತಮ್ಮ ವಾಹನ ಪರೀಕ್ಷೆ ಮಾಡಿಸಿದ ಸಮಯದಲ್ಲಿ ಪೆಟ್ರೋಲ್​ ಟ್ಯಾಂಕ್​ನಲ್ಲಿ ನೀರು ತುಂಬಿರುವುದು ತಿಳಿದಿದೆ. ಕೂಡಲೇ ಪೆಟ್ರೋಲ್​ ಬಂಕ್​ಗೆ ಧಾವಿಸಿರುವ ವಾಹನಗಳ ಮಾಲೀಕರು ಅಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಪೆಟ್ರೋಲ್​ ಬಂಕ್​ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಾಹನಗಳ ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net