

ಬೆಂಗಳೂರು: ಕರೊನಾ ಸೋಂಕು ಪ್ರಕರಣಗಳು ಹೆಚ್ಚಿವೆ ಎಂದು ಜನರು ಗಾಬರಿಯಾಗುವುದು ಬೇಡ. ನನ್ನ ಅನಿಸಿಕೆ ಏನೆಂದರೆ, ಕೆಲಸ ಏನೂ ಇಲ್ಲದಿದ್ದರೆ ಸ್ವಲ್ಪ ದಿನ ಮನೆಯಲ್ಲೇ ಇರಿ. ನಿಮಗೂ ಅನುಕೂಲ ಆಯ್ತದೆ, ಬೇರೆಯವರಿಗೂ ಅನುಕೂಲ ಆಯ್ತದೆ. ಹೀಗೆಂದು ವಸತಿ ಸಚಿವ ವಿ.ಸೋಮಣ್ಣ ಸಾರ್ವಜನಿಕರಿಗೆ ಮನವಿ ಮಾಡಿದರು.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಹೌಸಿಂಗ್ ಬೋರ್ಡ್ ಹತ್ತಿರ ಇರುವ ಸರ್ಕಾರಿ ಯುನಾನಿ ಹೋಮಿಯೋಪತಿ ವೈದ್ಯಕೀಯ ಕೇಂದ್ರವನ್ನು ಕರೊನಾ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ.
ಈ ಕೇಂದ್ರಕ್ಕೆ ಸಚಿವ ಕೆ.ಗೋಪಾಲಯ್ಯ ಜತೆಗೆ ಗುರುವಾರ ಭೇಟಿ ನೀಡಿ ಹಾಸಿಗೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯ ಗಾಬರಿ, ಧೃತಿಗೆಡುವುದರಿಂದಲೇ ಜನರು ಅರ್ಧ ನೋವು ಅನುಭವಿಸುತ್ತಿರುವಂತಿದೆ. ಸರ್ಕಾರ ಅಗತ್ಯವಾದ ಎಲ್ಲ ಕ್ರಮವಹಿಸಿದೆ, ತೀರಾ ಗಂಭೀರ ಸ್ಥಿತಿಯಲ್ಲಿ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಅಲ್ಪರೋಗ ಲಕ್ಷಣವುಳ್ಳವರು ಕಳೆದ ವರ್ಷದಂತೆ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಗೋವಿಂದರಾಜನಗರ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿದೆ. ಅಲ್ಲದೆ, ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಮೆಡಿಸಿನ್, ಇನ್ನಿತರ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.