ನಮ್‌ ಮಗಳು ನಿಮ್ಮೂರ್‌ ಸೊಸೆ ಎಂದ ಶಾಸಕ- ಮೂರೂ ಮಕ್ಳನ್ನ ನಮ್‌ ಗಂಡ್ಮಕ್ಳಿಗೆ ಕೊಡಿ ಎಂದ ಈಶ್ವರಪ್ಪ!

vidhanasabhe
Published on

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಒಂದು ಹಲವು ಬಿಸಿಬಿಸಿ ಚರ್ಚೆಯ ನಡುವೆ ಅನುದಾನದ ವಿಷಯದಲ್ಲಿ ನಡೆದ ಮಾತುಕತೆ ಮಾತ್ರ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದೆ. ಸಂಬಂಧದ ಕುರಿತಾಗಿ ನಡೆದ ಮಾತುಕತೆಯಿಂದ ಎಲ್ಲರೂ ನಕ್ಕಿದ್ದರಿಂದ ಕಲಾಪದಲ್ಲಿ ಒಂದು ನಗುವಿನ ವಾತಾವಣೆ ಸೃಷ್ಟಿಯಾಗಿತ್ತು.

ಅಷ್ಟಕ್ಕೂ ಆಗಿದ್ದೇನೆಂದರೆ, ಬೇಲೂರು ಶಾಸಕ ಲಿಂಗೇಶ್ ಅನುದಾನದ ಕುರಿತು ಮಾತನಾಡುತ್ತಿದ್ದರು. ತಮ್ಮ ಕ್ಷೇತ್ರಕ್ಕೆ ಯಾವುದೇ ಯೋಜನೆ ಕೊಟ್ಟಿಲ್ಲ, ಅನುದಾನ ಕೊಟ್ಟಿಲ್ಲ ಎಂದು ಸ್ವಲ್ಪ ಗರಂ ಆಗಿಯೇ ವಿಷಯ ಮಂಡಿಸುತ್ತಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪನವರೇ, 2019-20ರಲ್ಲಿ ನನ್ನ ಕ್ಷೇತ್ರಕ್ಕೆ ಯಾವುದೇ ಯೋಜನೆ ಕೊಟ್ಟಿಲ್ಲ. ಕೆಲವು ಕ್ಷೇತ್ರಗಳಿಗೆ ಮಾತ್ರ ಕೊಟ್ಟಿದ್ದಾರೆ. ಸಿಎಂಜೆಸಿ ರೋಡ್‌ ಎಂದು ಇತ್ತು, ಅದು ಇಲ್ಲ. ಸುಮಾರ್ಗ ತಂದ್ರು, ಗ್ರಾಮ ವಿಕಾಸ ಯಾವುದೂ ಇಲ್ಲ, ಹೀಗಾದರೆ ಹೇಗೆ? ನಮ್ಮ ಕ್ಷೇತ್ರದತ್ತ ಸ್ವಲ್ಪ ಚಿತ್ತ ಹರಿಸಿ, ಇಲ್ಲದಿದ್ದರೆ ತುಂಬಾ ಸಮಸ್ಯೆಯಾಗುತ್ತದೆ ಎಂದರು.

ಇಷ್ಟೇ ಹೇಳಿದ್ದರೆ ಇಷ್ಟೆಲ್ಲಾ ಸ್ವಾರಸ್ಯಕರ ವಾತಾವರಣ ಸೃಷ್ಟಿಯಾಗುತ್ತಲೇ ಇರಲಿಲ್ಲ. ಅಲ್ಲಿಯವರೆಗೂ ಸ್ವಲ್ಪ ಗಂಭೀರವಾಗಿಯೇ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದ ಲಿಂಗೇಶ್‌ ಅವರು, ನಂತರ ನೋಡಿ ಈಶ್ವರಪ್ಪನವರೇ ನಮ್ಮ ಮಗಳನ್ನು ನಿಮ್ಮ ಊರಿಗೆ ಕೊಟ್ಟಿರೋದು, ಆ ಕಾರಣಕ್ಕಾದ್ರೂ ದಯಮಾಡಿ ಅನುದಾನ ಕೊಡಿ, ನಾವು ನೀವು ಸಂಬಂಧಿಕರು ಕಣ್ರೀ ಎಂದರು. ಇಷ್ಟು ಹೇಳುತ್ತಿದ್ದಂತೆಯೇ ಕಲಾಪದಲ್ಲಿ ಕೆಲವೆಡೆ ನಗುವಿನ ಶಬ್ದ ಕೇಳಿಸಿತು.

ಕೂಡಲೇ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನಗುತ್ತಲೇ, ಹೀಗೆ ಸಂಬಂಧ ಬೆಳೆಸೋದ್ರಿಂದ ಏನಾದ್ರೂ ಅಭಿವೃದ್ಧಿ ಕೆಲ್ಸ ಆಗತ್ತೆ ಅಂತಾದರೆ ಇಲ್ಲಿರೋ 224 ಜನನೂ ಸಂಬಂಧ ಬೆಳೆಸೋಕೆ ರೆಡಿ ಇದ್ದಾರೆ ನೋಡಿ ಮತ್ತೆ ಎಂದು ಚಟಾಕಿ ಹಾರಿಸಿದರು.

ಅಷ್ಟಕ್ಕೇ ಸುಮ್ಮನಾಗದ ಸಚಿವ ಈಶ್ವರಪ್ಪ ಎದ್ದು ನಿಂತು, ಕಾಗೇರಿಯವರತ್ತ ಮುಖಮಾಡಿ, ನಮ್ಮ ಊರಲ್ಲಿ ಬಹಳ ಜನ ಗಂಡುಮಕ್ಕಳು ಇದ್ದಾರೆ ನೋಡಿ. ಒಬ್ಬಳೇ ಹೆಣ್ಣಮಗಳನ್ನು ಕೊಟ್ಟರೆ ಹೇಗೆ. ನಿಮಗೆ ಮೂವರು ಹೆಣ್ಣುಮಕ್ಕಳು ಅಲ್ವಾ?. ಅವರನ್ನೂ ನಮ್ಮ ಊರಿಗೆ ಕೊಟ್ಬಿಡಿ ಎಂದರು. ಆಗ ಕಾಗೇರಿಯವರು, ನೀವು ಎಲ್ಲರನ್ನೂ ಶಿವಮೊಗ್ಗಕ್ಕೆ ತಗೊಂಡು ಹೋದರೆ ಬೇರೆ ಕಡೆಯ ಗಂಡು ಮಕ್ಕಳು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ಈ ಸಂಬಂಧದ ಮಾತಿನಿಂದ ಕಲಾಪದಲ್ಲಿ ಸ್ವಲ್ಪ ಸಮಯ ಶಾಂತ ವಾತಾವಣೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net