ವಿಕಸಿತ ಭಾರತಕ್ಕೆ ಬಜೆಟ್​ : ಎಸ್​.ವಿ. ಸಂಕನೂರು

02GDG03
Published on

ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ನನಸು ಮಾಡಲು ಅದರ ಆಧಾರ ಸ್ಥಂಭಗಳಾದ ಯುವಕರು, ಬಡವರು, ರೈತರು ಮತ್ತು ಮಹಿಳೆಯರ ಸಬಲೀಕರಣ ಹಾಗೂ ಕಲ್ಯಾಣಕ್ಕಾಗಿ ವಿನೂತನವಾದ ಕಾರ್ಯಕ್ರಮಗಳನ್ನು ಜಾರಿ ಮಾಡಲು ಅರ್ಥ ಸಚಿವೆ ನಿರ್ಮಲಾ ಸೀತಾರಮನ್​ ಅವರು ಐತಿಹಾಸಿಕ ಮಧ್ಯಂತರ ಬಜೆಟ್​ ಮಂಡಿಸಿದ್ದಾರೆ ಎಂದು ಶಾಸಕ ಎಸ್​. ವಿ. ಸಂಕನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ತಿಳಿಸಿರುವ ಅವರು, ದೇಶದ ಸರ್ವಾಂಗೀಣ ಅಭಿವೃದ್ದಿ ಮತ್ತು ಪ್ರಗತಿಗಾಗಿ ಅವಶ್ಯ ಇರುವ ಸಂಶೋಧನೆ ಹಾಗೂ ಆವಿಷ್ಕಾರಗಳಿಗಾಗಿ ಒಂದು ಲ ಕೋಟಿ ಅನುದಾನ ನಿಗದಿಪಡಿಸಿದ್ದು ವಿಶೇಷ. ಯುವಕರು ನೂತನವಾಗಿ ಪ್ರಾರಂಭಿಸುವ ಸ್ಟಾರ್ಟಪ್​ ಕಾರ್ಯಕ್ರಮಕ್ಕೆ ಪ್ರೋತ್ಸಾಹದಾಯಕ ಸೌಲಭ್ಯಗಳನ್ನು ನೀಡಿರುವ ಸಂತಸದ ಸಂಗತಿಯಾಗಿದೆ. ಕಡುಬಡವರಿಗಾಗಿ ಈಗಾಗಲೇ ಗ್ರಾಮೀಣ ಹಾಗೂ ಶಹರ ಪ್ರದೇಶದಲ್ಲಿ ನಾಲ್ಕು ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿಯಾಗಿ ಎರಡು ಕೋಟಿ ಮನೆಗಳನ್ನು ನಿರ್ಮಾಣ ಮಾಡಲು ಬಜೆಟ್​ ನಲ್ಲಿ ಹಣವನ್ನು ನಿಗದಿಪಡಿಸಿರುವುದು ಮತ್ತು ನಲವತ್ತು ಸಾವಿರ ವಂದೇ ಭಾರತ ಮಾದರಿಯಲ್ಲಿ ಹೊಸ ಭೋಗಿಗಳ ನಿರ್ಮಾಣ ಮಾಡಿ ಜನಸಾಮಾನ್ಯರ ಪ್ರಯಾಣದ ಅನುಕೂಲ ಮಾಡಿರುವುದು ಸ್ವಾಗತಾರ್ಹ ಎಂದು ಎಸ್​.ವಿ. ಸಂಕನೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net