ತಿಂಗಳಲ್ಲಿ ಬೀಳಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ, ವಾರದ ಪ್ರಮಾಣ ಒಂದು ದಿನದಲ್ಲೇ, ದಿನದ ಪ್ರಮಾಣ ಗಂಟೆಯಲ್ಲಿ...!

Rain
Published on

ಬೆಂಗಳೂರು: ಹವಾಮಾನ ವೈಪರಿತ್ಯಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಮುಂಗಾರು ಮಳೆ ಕ್ಷೀಣಿಸಿದರೆ ಜುಲೈನಲ್ಲಿ ಸುರಿಯಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ ವಾಡಿಕೆಗಿಂತ ಅಧಿಕವಾಗಿ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ 4 ವರ್ಷಗಳಿಂದ ಮಳೆ ಬೀಳುವ ಅವಧಿಯಲ್ಲಿ ಗಣನೀಯ ವ್ಯತ್ಯಾಸಯಾಗುತ್ತಿರುವುದು ಕಂಡುಬಂದಿದೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಮಲೆನಾಡು ಜಿಲ್ಲೆಗಳಲ್ಲಿ 2018ರ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ, 2019ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಕಳೆದ 4 ವರ್ಷಗಳಿಂದ ಜೂನ್‌ನಲ್ಲಿ ಮಳೆ ಕುಂಠಿತವಾಗುತ್ತಿದೆ. ಅದೇರೀತಿ, ದಕ್ಷಿಣ ಒಳನಾಡಿನಲ್ಲಿ 2017ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೆ, 2018ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ 2017, 2019, 2020 ಮತ್ತು 2021ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ 2018 ಮತ್ತು 2022ರ ಜೂನ್‌ನಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಕಳೆದ 5 ವರ್ಷಗಳಿಂದ ಜೂನ್ ಅವಧಿಯಲ್ಲೇ ರಾಜ್ಯಾದ್ಯಂತ ಮಳೆ ಕುಂಠಿತವಾಗಿದೆ. ಈ ಕ್ರಮದಿಂದ ಮಳೆಗಾಲ ಅವಧಿಯು ಜೂನ್‌ನಿಂದ ಜುಲೈಗೆ ಬದಲಾಗಿದೆ.

ಗಂಟೆಯಲ್ಲೇ 100 ಮಿಮೀ ಮಳೆ: ತಿಂಗಳಲ್ಲಿ ಬೀಳಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ, ವಾರದಲ್ಲೇ ಬೀಳಬೇಕಿದ್ದ ಮಳೆ ಪ್ರಮಾಣ ಒಂದು ದಿನದಲ್ಲೇ ಹಾಗೂ ದಿನದಲ್ಲಿ ಬೀಳುವ ಮಳೆ ಪ್ರಮಾಣ ಒಂದು ಗಂಟೆಯಲ್ಲಿ ಸುರಿಯುತ್ತಿದೆ. ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಒಂದು ಗಂಟೆ ಅವಧಿಯಲ್ಲಿ ಅಂದಾಜು 100 ಮಿಮೀವರೆಗೆ ಮಳೆಯಾಗುತ್ತಿದೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net