

ಬೆಂಗಳೂರು: ಕರೊನಾ ವೈರಸ್ ಹರಡುವಿಕೆಯನ್ನು ತಕ್ಕಮಟ್ಟಿಗೆ ತಡೆಗಟ್ಟುವ ಉದ್ದೇಶದಿಂದ ಮಾಸ್ಕ್‌ಗಳ ಬಳಕೆ ಕಡ್ಡಾಯ ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಮಾಸ್ಕ್ ಧರಿಸದೇ ಹೋದರೆ ಭಾರಿ ಪ್ರಮಾಣದ ದಂಡ ಕಟ್ಟುವ ನಿಯಮವೂ ಜಾರಿಯಾಗಿದೆ.
ಆದರೆ ಅನೇಕ ಮಂದಿ ರೆಡಿಮೇಡ್ ಮಾಸ್ಕ್ ಬದಲಾಗಿ ಟವಲ್, ಕರ್ಚಿಫ್, ಕರವಸ್ತ್ರ ಅಥವಾ ಇನ್ನಾವುದೇ ರೀತಿಯ ಬಟ್ಟೆಗಳಿಂದ ಮೂಗು-ಬಾಯಿ ಮುಚ್ಚಿಕೊಳ್ಳುವುದಿದೆ. ಇಂಥ ಸಂದರ್ಭದಲ್ಲಿ ಕೆಲವು ಪೊಲೀಸರು ಅವರನ್ನು ನಿಲ್ಲಿಸಿ ದಂಡ ಕೇಳುತ್ತಿರುವ ಬಗ್ಗೆ ವರದಿಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಬಹಳ ಗೊಂದಲವೂ ಉಂಟಾಗಿದೆ.
ಈ ಗೊಂದಲವನ್ನು ಪರಿಹರಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಸಾರ್ವಜನಿಕರು ರೆಡಿಮೇಡ್ ಮಾಸ್ಕ್ ಅಷ್ಟೇ ಅಲ್ಲದೇ, ಬಟ್ಟೆ ಅಥವಾ ಕರವಸ್ತ್ರದಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡಿದ್ದರೂ ಅದನ್ನು ಮಾಸ್ಕ್ ಎಂದೇ ಪರಿಗಣಿಸಬೇಕು. ಆದರೆ ಅವರು ಸಂಪೂರ್ಣವಾಗಿ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡಿರಬೇಕು ಎಂದಿದ್ದಾರೆ.
ಕರೊನಾ ಕುರಿತಂತೆ ಇಂದು ನಡೆದ ಬಿಬಿಎಂಪಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಮಾರ್ಷಲ್ ಮೇಲ್ವಿಚಾರಕರ ಜಂಟಿ ಸಭೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮಾರ್ಷಲ್‌ಗಳಿಗೆ ಅವರು ಈ ಮಾಹಿತಿ ನೀಡಿದ್ದಾರೆ.
ಅನೇಕ ಮಂದಿಗೆ ಹಣ ಕೊಟ್ಟು ಮಾಸ್ಕ್ ಖರೀದಿ ಮಾಡುವ ಶಕ್ತಿ ಇರುವುದಿಲ್ಲ. ಅಂಥವರು ಯಾವುದೇ ಬಟ್ಟೆಗಳಿಂದ ಸಂಪೂರ್ಣವಾಗಿ ಮೂಗು-ಬಾಯಿ ಮುಚ್ಚಿಕೊಂಡಿದ್ದರೂ ಅದನ್ನು ಮಾಸ್ಕ್ ಎಂದು ಪರಿಗಣಿಸಿ. ಇಂತಹ ಪ್ರಕರಣಗಳಲ್ಲಿ ದಂಡ ವಿಧಿಸಬೇಡಿ. ವ್ಯಕ್ತಿ ಸೀನಿದರೆ ಅಥವಾ ಕೆಮ್ಮಿದಾಗ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹಬ್ಬಬಾರದು ಎನ್ನುವ ಕಾರಣಕ್ಕೆ ಮಾಸ್ಕ್ ಧರಿಸುವಂತೆ ಹೇಳಲಾಗುತ್ತಿದೆ. ಇದೇ ಸಮಯದಲ್ಲಿ ಮಾಸ್ಕ್ ಧರಿಸಿದವರಿಗೂ ಇದು ಹಬ್ಬದಂತೆ ತಡೆಯಬಹುದು. ಬಟ್ಟೆಯಿಂದ ರಕ್ಷಣೆ ಪಡೆದರೂ ತಪ್ಪಿಲ್ಲ ಎಂದರು.
ಮಾಸ್ಕ್ ಹಾಕದವರಿಗೆ ದಂಡ ಹಾಕುವ ಜತೆಜತೆಗೇ ಮಾಸ್ಕ್ ಧರಿಸದೇ ಇದ್ದರೆ ಏನು ಸಮಸ್ಯೆ ಆಗುತ್ತದೆ ಎಂಬ ಬಗ್ಗೆ ತಿಳಿವಳಿಕೆ ಹೇಳಬೇಕಾಗಿದೆ. ಮಾಸ್ಕ್ ಧರಿಸದೆ ಕರೊನಾ ಸೋಂಕನ್ನು ಹೇಗೆ ತಕ್ಕಮಟ್ಟಿಗಾದರೂ ನಿಭಾಯಿಸಬಹುದು ಎಂಬ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ಆಯುಕ್ತರು ಅಭಿಪ್ರಾಯ ಪಟ್ಟರು.
ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದರೆ ಜೈಲು: ಕರೊನಾ ಸೋಂಕು ಹಬ್ಬುವುದನ್ನು ತಡೆಯುವ ಉದ್ದೇಶದಿಂದ ಮಾರ್ಷಲ್‌ಗಳು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಅವರ ಮೇಲೆ ಹಲ್ಲೆ ಮಾಡಲು ಯಾರಾದರೂ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಜೈಲು ಶಿಕ್ಷೆಯೂ ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.