ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಮೂವರ ಕೊಲೆ ಮಾಡಿದ!

Mysore
Published on

ಮೈಸೂರು: ಪಾತಕಿಯೊಬ್ಬ ಎರಡೆರಡು ಮದುವೆಯಾಗಿ ಇಬ್ಬರೂ ಪತ್ನಿಯನ್ನು ಕೊಲೆ ಮಾಡಿದ ಘೋರ ದುರಂತ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.

ಈರಯ್ಯ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈತ ಈ ಮೊದಲು ಒಂದು ಮದುವೆಯಾಗಿದ್ದ. ಆದರೆ ಆಕೆಯ ಜತೆ ಜಗಳವಾಗಿ ಕೊಲೆ ಮಾಡಿದ್ದ. ಈ ಕೃತ್ಯಕ್ಕೆ ಈರಯ್ಯನಿಗೆ ಜೈಲು ಶಿಕ್ಷೆಯಾಗಿತ್ತು. ಜೈಲಿನಿಂದ ಹೊರಬಂದಿದ್ದ ಈರಯ್ಯ ಮಹದೇವಮ್ಮ ಎಂಬಾಕೆ ಜತೆ ಮದುವೆಯಾಗಿದ್ದ. ಜೈಲಿನಿಂದ ಹೊರಬಂದಾಗ ಈಕೆ ಗರ್ಭಿಣಿಯಾಗಿದ್ದಳು. ಈಕೆಯ ಮೇಲೂ ಈರಯ್ಯ ಹಲ್ಲೆ ಮಾಡಿದ್ದಾನೆ.

ಈ ಸಂದರ್ಭದಲ್ಲಿ ತಡೆಯಲು ಬಂದ ನಾಲ್ಕು ಜನರ ಮೇಲೂ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾನೆ. ಎದುರು ಮನೆಯ ವ್ಯಕ್ತಿಯ ಜತೆಯೂ ಜಗಳವಾಡಿಕೊಂಡಿದ್ದ ಈರಯ್ಯ, ಆತನ ತಂದೆ-ತಾಯಿಯಂದಿರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ. ಈತನ ಕೃತ್ಯಕ್ಕೆ ಪತ್ನಿ ಮಹದೇವಮ್ಮ ಸೇರಿದಂತೆ ಎದುರು ಮನೆಯ ನಿಂಗಮ್ಮ(50) ಮತ್ತು ಮಾದಯ್ಯ(60) ಕೊಲೆಯಾಗಿದ್ದಾರೆ.

ದಾಳಿಗೆ ಒಳಗಾಗಿರುವ ನಿಂಗಮ್ಮ ತಂದೆ, ತಾಯಿ ಹಾಗೂ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಎಸ್ಪಿ ಆರ್.ಚೇತನ್, ಡಿವೈಎಸ್ಪಿ ಗೋವಿಂದರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net