

ಬೆಂಗಳೂರು: ಸಹಕಾರಿ ಕ್ಷೇತ್ರದ ಸಮಗ್ರ ಸುಧಾರಣೆಗೆ ನೂತನ ಸಚಿವ ಎಸ್.ಟಿ. ಸೋಮಶೇಖರ್ ಒಲವು ವ್ಯಕ್ತಪಡಿಸಿದ್ದು, ಸಹಕಾರಿ ವಲಯದ ತಜ್ಞರು ಹಾಗೂ ಸಹಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವಿಕಾಸಸೌಧದ ಕಚೇರಿಗೆ ಗುರುವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇಷ್ಟವಾದ ಖಾತೆ ನೀಡಿರುವ ಸಿಎಂಗೆ ಕೃತಜ್ಞತೆ ಸಲ್ಲಿಸುವೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವೆ. ರೈತರ ಸಾಲ ಮನ್ನಾ ಸೇರಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಇಲಾಖೆ ರೂಪಿಸಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವೆ. ಬಜೆಟ್ ಪ್ರಸ್ತಾವನೆ ಸಂಬಂಧ ಸಿಎಂ ಈಗಾಗಲೇ ಸಭೆ ನಡೆಸಿದ್ದು, ರೈತ ಪರ ಯೋಜನೆ ಪ್ರಕಟಿಸುವ ನಿರೀಕ್ಷೆಯಿದೆ ಎಂದರು.
ಆಪ್ತರಲ್ಲಿ ಅಸಮಾಧಾನವಿಲ್ಲ: ಆಪ್ತರೆಲ್ಲರೂ ಒಟ್ಟಾಗಿಯೇ ಇದ್ದೇವೆ. ಯಾವುದೇ ಅಸಮಾಧಾನವಿಲ್ಲ, ಯಾರಿಗೂ ಬೇಸರವಿಲ್ಲ. ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ರಿಗೆ ಸಚಿವ ಸ್ಥಾನದ ವಿಚಾರವನ್ನು ಸಿಎಂ ನೋಡಿಕೊಳ್ಳುತ್ತಾರೆ ಎಂದು ಸೋಮಶೇಖರ್ ಪ್ರತಿಕ್ರಿಯಿಸಿದರು.
ಕುಟುಂಬಸಹಿತ ಪೂಜೆ: ವಿಕಾಸ ಸೌಧದ ನೆಲಮಹಡಿಯ ಕೊಠಡಿ ಸಂಖ್ಯೆ 38ರಲ್ಲಿರುವ ತಮ್ಮ ಕಚೇರಿಗೆ ಕುಟುಂಬಸಹಿತ ಪೂಜೆ ಸಲ್ಲಿಸುವ ಮೂಲಕ ಸೋಮಶೇಖರ್ ಕಾರ್ಯಾರಂಭಿಸಿದರು. ಹಿತೈಷಿಗಳು, ಅಭಿಮಾನಿಗಳು ಇದ್ದರು.