

ವಿಜಯವಾಣಿ ಸುದ್ದಿಜಾಲ ಬೈಂದೂರು
ಕಾಂಗ್ರೆಸ್ ಪಕ್ಷ ದೇಶದ ಜನರ ಬಡತನ ದೂರ ಮಾಡಿಲ್ಲ. ಬಡವರನ್ನು ಬಡವರಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಬಡವರ ಮಕ್ಕಳಿಗೆ ಶಿಕ್ಷಣ, ಹೊಟ್ಟೆಗೆ ಹಿಟ್ಟು ನೀಡುವ ಕಾರ್ಯವನ್ನು ಕೂಡ ಸರಿಯಾಗಿ ಮಾಡಿಲ್ಲ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬುಡಕಟ್ಟು ಜನಾಂಗವನ್ನು ಗುರುತಿಸಿ ವಾಲ್ಮೆಕಿ ಜಯಂತಿ ಮಾಡುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸುವ ಕಾರ್ಯ ಆರಂಭಿಸಿದರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಗ್ಗರ್ಸೆ ಗುಡ್ಡೆಯಂಗಡಿಯಲ್ಲಿ ಸೋಮವಾರ ನಡೆದ ಎಸ್ಟಿ ಸಮಾವೇಶದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಅಭಿವೃದ್ಧಿಗಾಗಿ ಸಾವಿರಾರೂ ಕೋಟಿ ರೂ. ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶವನ್ನು ಸುದೀರ್ಘ ವರ್ಷ ಆಡಳಿತ ನಡೆಸಿ ದೇಶದ ಜನತೆಗೆ ಖಾಲಿ ಚೊಂಬು ನೀಡಿತ್ತು. ಹತ್ತು ವರ್ಷದ ಹಿಂದೆ ಆಡಳಿತಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ. ದೇಶದ ಗ್ರಾಮೀಣ ಭಾಗದ ಮಹಿಳೆಯರಿಗೆ ಗೌರವ ತಂದುಕೊಡಲು ಹನ್ನೆರಡು ಕೋಟಿ ಶೌಚಗೃಹ ನಿರ್ಮಿಸಿದ್ದಾರೆ. ಹತ್ತು ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿದ್ದಾರೆ. ಬೈಂದೂರು ಸೇರಿದಂತೆ ಕ್ಷೇತ್ರದ 2.61 ಲಕ್ಷ ಜನರಿಗೆ ಆಯುಷ್ಮಾನ್ ಯೋಜನೆಯಡಿ 260 ಕೋಟಿ ರೂ. ಆಸ್ಪತ್ರೆ ಬಿಲ್ಗಳನ್ನು ನರೇಂದ್ರ ಮೋದಿ ಸರ್ಕಾರ ಪಾವತಿಸಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ನ ಹಲವಾರು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಚಿತ್ರನಟಿ ಶ್ರುತಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮಂಡಲ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಮ ನಾಯ್ಕ, ಗಜೇಂದ್ರ ಬೇಲೆಮನೆ, ಶಿವರಾಜ ಪೂಜಾರಿ, ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
60 ವರ್ಷ ಗರೀಬಿ ಹಠಾವೋ ಎಂದವರು ತಮ್ಮ ಹೆಂಡತಿ ಮಕ್ಕಳ ಬಡತನ ದೂರ ಮಾಡಿದರೇ ಹೊರತು ಬಡವರ ಬಡತನ ದೂರ ಮಾಡಿಲ್ಲ. ಬಡವರ ಬಡತನ ದೂರ ಮಾಡಲು ಪ್ರಧಾನಿಯಾಗಿ ನರೇಂದ್ರ ಮೋದಿಯವರೇ ಬರಬೇಕಾಯಿತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ. ಅದನ್ನು ರಾಜ್ಯ ಕಾಂಗ್ರೆಸ್ ಪಕ್ಷ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದೆ. -ಭಾರತಿ ಶೆಟ್ಟಿ, ವಿಧಾನ ಪರಿಷತ್ ಸದಸ್ಯರು
ದೇಶಕ್ಕೆ ಏನೂ ಕೊಡುಗೆ ನೀಡದ ಕಾಂಗ್ರೆಸ್ಗೆ ಜನರ ಬಳಿ ಹೋಗಿ ಮತ ಕೇಳುವ ನೈತಿಕ ಹಕ್ಕು ಇಲ್ಲ. ಕಾಂಗ್ರೆಸ್ ಸಾಧನೆ ಶೂನ್ಯ. ಬಿಜೆಪಿ ಬೆಂಬಲ ನೋಡಿ ಕೆಲವರಲ್ಲಿ ಈಗಾಗಲೇ ಸೋಲಿನ ಭಯ ಹುಟ್ಟಿದೆ. ಹೀಗಾಗಿ ವಿರೋಧ ಪಕ್ಷಕ್ಕೆ ಅಪಪ್ರಚಾರವೇ ಕೊನೆಯ ಅಸ್ತ್ರವಾಗಿದೆ. ಕ್ಷೇತ್ರಾದ್ಯಂತ ಬಿಜೆಪಿ ಅಲೆ ಎದ್ದಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ ಬಿ.ವೈ.ರಾಘವೇಂದ್ರ ಅವರು ಅತ್ಯಧಿಕ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. -ಶ್ರುತಿ, ಬಿಜೆಪಿ ತಾರಾ ಪ್ರಚಾರಕಿ https://www.vijayavani.net/manual-release-in-bramhavara https://www.vijayavani.net/convenent-exchange-program-in-bhuvanendra-college