ಗ್ರಾಮೀಣ ವಿದ್ಯಾರ್ಥಿಗಳಿಗೆ ತಾರತಮ್ಯ ಆಗದ ರೀತಿ ಆನ್‌ಲೈನ್ ಶಿಕ್ಷಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ

29-klr-5
Published on

ಕೋಲಾರ: ಗ್ರಾಮೀಣ ವಿದ್ಯಾರ್ಥಿಗಳಿಗೆ ತಾರತಮ್ಯ ಆಗದ ರೀತಿ ಆನ್‌ಲೈನ್ ಶಿಕ್ಷಣ ನೀಡುವ ಸಂಬಂಧ ತಜ್ಞರ ಸಮಿತಿ ವರದಿ ಆಧಾರದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.

ತಾಲೂಕಿನ ವೇಮಗಲ ಸರ್ಕಾರಿ ಪಿಯು ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿ, ಆನ್‌ಲೈನ್ ಶಿಕ್ಷಣ ಪೂರಕವಾಗುತ್ತದೆಯೇ ವಿನಾ ಬದಲಿ ಶಿಕ್ಷಣ ಆಗುವುದಿಲ್ಲ. ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಬಗ್ಗೆ ಹಾಗೂ ಹೆಚ್ಚು ಶುಲ್ಕ ವಸೂಲಾತಿ ಬಗ್ಗೆ ಆಕ್ಷೇಪ ಇತ್ತು. ಇದೀಗ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆನ್‌ಲೈನ್ ಶಿಕ್ಷಣ ಸಂಬಂಧ ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿ ಕಳುಹಿಸಿದ್ದು, ಇದನ್ನು ಆಧರಿಸಿ ತಾತ್ಕಾಲಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದರು.

ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಇಲ್ಲ, ವಾರಕ್ಕೊಮ್ಮೆ ಪಾಲಕರ ಜತೆ ಸಂಹವನಕ್ಕೆ ಅವಕಾಶ ನೀಡಲಾಗಿದೆ. 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ತರಗತಿ ನಡೆಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ ಎಂದರು.

ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನದಿಂದ ವಂಚಿತರಾಗುತ್ತಿದ್ದೇವೆಂಬ ಭಾವನೆ ಬರಬಾರದು. ಎಷ್ಟು ಮಕ್ಕಳು ಮನೆಯಲ್ಲಿ ರೇಡಿಯೋ, ಟಿವಿ, ಕೇಬಲ್ ಸಂಪರ್ಕ, ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಸಂಪರ್ಕ ಹೊಂದಿದ್ದಾರೆಂದು ಸರ್ವೆ ನಡೆಸಲಾಗಿದೆ. ಗ್ರಾಮೀಣ ಮಕ್ಕಳಲ್ಲಿ ವಿಶೇಷ ಗಮನ ಹರಿಸಿ ತಾರತಮ್ಯ ರಹಿತ ಶಿಕ್ಷಣ ಹೇಗೆ ನೀಡಬಹುದು ಎಂಬ ಬಗ್ಗೆ ತಜ್ಞರ ಸಮಿತಿ ವರದಿಗೆ ಕಾಯುತ್ತಿದ್ದೇವೆ ಎಂದರು.

ಸರ್ಕಾರಿ ಶಾಲೆ ಉಳಿವಿಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಜತೆ ವಿಸ್ತೃತ ಚರ್ಚೆ ನಡೆಸಿ ಪೂರಕವಾಗುವ ಅಂಶಗಳಿದ್ದರೆ ಪರಿಗಣಿಸಲಾಗುವುದು. ಶಾಲೆ ಪುನರಾರಂಭಕ್ಕೂ ಮುನ್ನ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಸರ್ವೇ ನಡೆಸಲಾಗಿದ್ದು, ಈ ಸಮಯದಲ್ಲಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಲಾಸ್ಟ್ ಪರೀಕ್ಷೆ ಮುಗಿಸಿ ಏನ್ ತಿನ್ನೋಕೆ ಆಸೆ?: ಬಾಪ್ಪಾ ಮರಿ, ಎಕ್ಸಾಂ ಚೆನ್ನಾಗಿ ಮಾಡಿದ್ಯಾ....ಹೇಗೆ ಮಾಡಿದ್ಯಮ್ಮಾ... ಸೈನ್ಸ್ ಪರೀಕ್ಷೆ ಚೆನ್ನಾಗಿ ಮಾಡಿದ್ದೀರಾ, ಗಣಿತ, ಇಂಗ್ಲೀಷ್ ಪರೀಕ್ಷೆ ಹೇಗಿತ್ತು, ಮ್ಯಾತ್ಸ್ ಕಷ್ಟ ಇತ್ತಾ, ಸೈನ್ಸ್ ಕಷ್ಟ ಇತ್ತಾ....? ಲಾಸ್ಟ್ ಪರೀಕ್ಷೆ ಮುಗಿಸಿ ಏನ್ ತಿನ್ಬೇಕೆಂದು ಆಸೆ, ಹೋಳಿಗೆನೋ, ದೋಸೆನೋ....ಇದು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮಕ್ಕಳಿಗೆ ಕೇಳಿದ ಪ್ರಶ್ನೆಗಳು.

ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಮುಗಿಸಿ ಹೊರಬರುತ್ತಿದ್ದ ಬಾಲಕ, ಬಾಲಕಿಯರನ್ನು ಖುದ್ದು ಕರೆದು ಪರೀಕ್ಷಾ ಕೇಂದ್ರದಲ್ಲಿ ಏನಾದ್ರು ತೊಂದರೆ ಇತ್ತಾ, ಆರಾಮವಾಗಿ ಪರೀಕ್ಷೆ ಬರೆದ್ರಿ ತಾನೇ, ಮನೆಯಿಂದಲೇ ಬಿಸಿನೀರು ತರಬೇಕು, ಪರೀಕ್ಷೆ ಮುಗಿಸಿ ಸೀದಾ ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂದಿನ ಪರೀಕ್ಷೆಗೆ ಓದಿಕೊಳ್ಳಿ, ಮುಂದಿನ ಮೂರು ಪರೀಕ್ಷೆಗಳನ್ನೂ ಚೆನ್ನಾಗಿ ಮಾಡಿ, ಆಲ್ ದಿ ಬೆಸ್ಟ್ ಎಂದು ಹುರಿದುಂಬಿಸಿದರು. ಸಚಿವರು ಕರೆಯುತ್ತಿದ್ದರೂ ಒಬ್ಬ ವಿದ್ಯಾರ್ಥಿ ಮಾತನಾಡಲು ಹಿಂಜರಿದಾಗ ಯಾಕೋ....

ಮೂಡ್ ಚೆನ್ನಾಗಿಲ್ವಾ, ಮನೆಗೆ ಹೋಗಬೇಕೆಂದು ಅನಿಸ್ತಿದ್ಯಾ ಎಂದು ಪ್ರಶ್ನಿಸಿದರು. ಲಾಸ್ಟ್ ಪರೀಕ್ಷೆ ಮುಗಿಸಿದ ಮೇಲೆ ಏನು ತಿನ್ಬೇಕೆಂದು ವಿದ್ಯಾರ್ಥಿಯೊಬ್ಬನನ್ನು ಪ್ರಶ್ನಿಸಿದಾಗ ವಿದ್ಯಾರ್ಥಿಗೆ ಏನು ಹೇಳಬೇಕೆಂದು ತೋಚದೆ ತಬ್ಬಿಬ್ಬು. ಕಡೆಗೆ ಸಚಿವರೇ ಹೋಳಿಗೆನೋ,... ದೋಸೆನೊ... ಏನೂ ತಿನ್ಬೇಕೆಂದು ಆಸೆ ಇಲ್ವಾ... ಎಂದು ತಮಾಷೆ ಮಾಡಿದರು.

ಪರೀಕ್ಷಾ ಸಿದ್ಧತೆಗೆ ಸಚಿವರ ಶಹಬಾಷ್‌ಗಿರಿ: ಕರೊನಾ ಆತಂಕವನ್ನು ಮೆಟ್ಟಿನಿಂತು ಶೇ.98 ಹಾಜರಾತಿಯೊಂದಿಗೆ ಮಕ್ಕಳು ಉತ್ಸಾಹದಿಂದ ಪರೀಕ್ಷೆಗೆ ಬಂದಿರುವ ಕುರಿತು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ವೇಮಗಲ್ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ಆವರಣಕ್ಕೆ ಬರುತ್ತಿದ್ದಂತೆ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಸ್ಕೌಟ್ಸ್-ಗೈಡ್ಸ್ ಸ್ವಯಂ ಸೇವಕರು ಸ್ಯಾನಿಟೈಸರ್ ಹಾಕಿದರು.

ಕೇಂದ್ರದ 15ಕ್ಕೂ ಹೆಚ್ಚು ಕೊಠಡಿಗಳನ್ನು ವೀಕ್ಷಿಸಿದ ಸಚಿವರು, ಪರೀಕ್ಷಾ ಸಿದ್ಧತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಂಡಿರುವ ಕ್ರಮ, ಸ್ವಯಂಸೇವಕರ ಸೇವೆ ಕಂಡು ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಶಹಬಾಷ್‌ಗಿರಿ ನೀಡಿದರು.

ಪರೀಕ್ಷಾ ಕೇಂದ್ರದ ಆವರಣದಲ್ಲಿ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿದ್ದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡು ಅವರ ನೆರವಿಗೆ ಅಭಿನಂದನೆ ಸಲ್ಲಿಸಿ ಉಳಿದಿರುವ ಪರೀಕ್ಷೆಯನ್ನೂ ಇಷ್ಟೇ ಮುತುವರ್ಜಿ ಹಾಗೂ ಬದ್ಧತೆಯಿಂದ ನಡೆಸಿಕೊಡಿ, ಲೋಪಗಳಿಗೆ ಅವಕಾಶವಿಲ್ಲದಂತೆ ಕ್ರಮವಹಿಸಿ ಎಂದು ಸೂಚಿಸಿದರು.

ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕೆ.ಎಸ್.ನಾಗರಾಜಗೌಡ, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಕಷ್ಟೋಡಿಯನ್ ಓ.ಮಲ್ಲಿಕಾರ್ಜುನ್, ಸ್ಥಾನಿಕ ಜಾಗೃತದಳದ ವಿ.ಮುರಳಿಮೋಹನ್, ಶಿಕ್ಷಕರಾದ ಭವಾನಿ,ಸಿ.ವಿ.ಶ್ರೀನಾಥ್, ಶಂಕರ್,ಅಂಬಿಕಾ, ಬ್ಯಾನರ್ಜಿ ಮತ್ತಿತರರಿದ್ದರು.

ಕ್ಯಾಲನೂರಿನ ಕರ್ನಾಟಕ ಪಬ್ಲಿಕ್ ಸ್ಕೂನ್‌ನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಪರೀಕ್ಷಾ ಕಾರ್ಯ ಸುಗಮವಾಗಿ ನಡೆಯುತ್ತಿರುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಂದ ಮಾಹಿತಿ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಪಂ ಸಿಇಒ ದರ್ಶನ್, ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ತಹಸೀಲ್ದಾರ್ ಶೋಭಿತಾ, ಬಿಇಒ ಕೆ.ಎಸ್.ನಾಗರಾಜಗೌಡ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹಾಜರಿದ್ದರು.

ನನಗೆ ಮಾತನಾಡಲು ಶಕ್ತಿ, ಅವಕಾಶ ಸಿಕ್ಕಿದ್ದು ತಾಯಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದರಿಂದ. ಶಿಕ್ಷಣ ಇಲಾಖೆ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಹೊರಟಿದ್ದೇನೆ. ನನ್ನ ಮೇಲೆ ಯಾವುದಾದರೂ ಲಾಬಿ ಕೆಲಸ ಮಾಡಿದರೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಲಾಬಿ ಮಾತ್ರ, ಖಾಸಗಿಯವರ ಲಾಬಿಗೆ ಮಣಿಯುವ ದಿನ ಬಂದಾಗ ಈ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ. ಎಸ್. ಸುರೇಶ್‌ಕುಮಾರ್, ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net