

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ದನಿಯತ್ತಿದ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಈಗ ವಾಕ್ಸಮರ ಶುರುವಾಗಿದೆ. ಅವರ ವಿರುದ್ಧವೇ ಅಕ್ರಮದ ಆರೋಪಗಳು ಕೇಳಿಬಂದಿವೆ.
ಸುಮಲತಾ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ. ಸುಮಲತಾ ಸುತ್ತ ಇರುವವರೆಲ್ಲ ಅಕ್ರಮದವರೇ. ಗೂಂಡಾಗಳ ರೀತಿ ವರ್ತಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾ ಅವರ ಬಳಿ ಕೆಲಸ ಮಾಡುವ ಆಪ್ತ ಸಹಾಯಕರನ್ನು ಬಂಧಿಸಿ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸುಮಲತಾ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ವಿರುದ್ಧ ಕೂಡ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸುಮಲತಾ ಲೆಟರಹೆಡ್ನಲ್ಲಿ ಸಹಿ ಹಾಕಿಸಿಕೊಂಡು ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ಹಣಕ್ಕಾಗಿ ಅವರು ಪೀಡಿಸಿದ್ದಾರೆ ಅಂತ ಆರೋಪಿಸಿರುವ ಶ್ರೀಕಂಠಯ್ಯ, ಸುಮಲತಾ ಅಟೆಂಡರ್ ಚೇತಕ್ ಒಬ್ಬ ಫ್ರಾಡ್, ನಯ ವಂಚಕ ಎಂದಿದ್ದಾರೆ.
ಚೇತಕ್ ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ, ಹಣಕ್ಕಾಗಿ ಪೀಡಿಸಿದ್ದಾನೆ. ಸುಮಲತಾಗೆ ಆಪ್ತ ಕಾರ್ಯದರ್ಶಿ ಎಂಬ ಹುದ್ದೆಯೇ ಇಲ್ಲಾ. ಶ್ರೀನಿವಾಸ್ ಭಟ್ ಎಂಬುವವನನನ್ನು ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಇದರಿಂದ ಅಧಿಕಾರಿಗಳು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಂಸದೆ ಸುಮಲತಾ ಮತ್ತು ಅವರ ಜತೆ ಕೆಲಸ ಮಾಡುವ ಆಪ್ತ ಸಹಾಯಕರು ಕಳೆದ ಎರಡು ತಿಂಗಳಿನಿಂದ ಯಾರ್ಯಾರಿಗೆ ಕರೆ ಮಾಡಿದ್ದಾರೆ ಎಂದು ತನಿಖೆಯಾಗಬೇಕು. ಇದನ್ನು ನಾವಿಲ್ಲಿಗೇ ಬಿಡುವುದಿಲ್ಲ, ಯಾವ ಅಧಿಕಾರಿಗಳ ಗಮನಕ್ಕೆ ತರಬೇಕೋ ತರುತ್ತೇವೆ ಎಂದರು.